ಮಡಿಕೇರಿ : ಅರೆಕಾಡು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪೋಷಣ್ ಮಾಸಾಚರಣೆ ಅಂಗವಾಗಿ ಅರಿವು ಕಾರ್ಯಕ್ರಮ, ಪ್ರಧಾನಮಂತ್ರಿ ಮಾತೃ ವಂದನ ಯೋಜನೆಯ ನೋಂದಣಿ ಅಭಿಯಾನ ಹಾಗೂ ಸೀಮಂತ ಕಾರ್ಯಕ್ರಮ ನಡೆಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ನಿರೂಪಣಾಧಿಕಾರಿ ಪ್ರಸನ್ನ ಕುಮಾರ್ ಮಾತನಾಡಿ, ಅರ್ಹ ಫಲಾನುಭವಿಗಳು ಪ್ರಧಾನಮಂತ್ರಿ ಮಾತೃ ವಂದನ ಯೋಜನೆಯ ಸೌಲಭ್ಯ ಪಡೆಯಲು ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಮಾತನಾಡಿ, ಪೌಷ್ಟಿಕಾಂಶದ ಕೊರತೆ ಮತ್ತು ರಕ್ತಹೀನತೆ ತಡೆಗಟ್ಟುವ ಉದ್ದೇಶದಿಂದ ಪೋಷಣ್ ಮಾಸಾಚರಣೆಗೆ ಮಹತ್ವ ನೀಡಲಾಗುತ್ತಿದೆ. ಮಕ್ಕಳಿಗೆ ಸ್ಥಳೀಯವಾಗಿ ದೊರೆಯುವ ಪೌಷ್ಟಿಕ ಆಹಾರ ನೀಡಬೇಕು ಹಾಗೂ ಜಂಕ್ ಫುಡ್‌ನಿಂದ ದೂರವಿಡಬೇಕು ಎಂದು ಸಲಹೆ ನೀಡಿದರು.
ಸಮುದಾಯ ಆರೋಗ್ಯ ಅಧಿಕಾರಿ ಪುಷ್ಪ ವಾಡಿಗೆರೆ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಸೇವನೆ ಹೆಚ್ಚುತ್ತಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದರು.ಮರಗೋಡು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಅರೆಕಾಡು ಗ್ರಾಮದ ಗ್ರಾಮಸ್ಥರು ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು. ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು. ಪುಷ್ಪ ಪ್ರಾರ್ಥಿಸಿದರು. ಹರಿಣಾಕ್ಷಿ ನಿರೂಪಿಸಿದರು. ಅನಿಲ ಅವರು ಸ್ವಾಗತಿಸಿದರು. ಸವಿತಾ ವಂದಿಸಿದರು.