ಶಕ್ತಿ ಯೋಜನೆ ಮೊಬೈಲ್‌ನ ಆಧಾರ ಕಾರ್ಡ್‌ ಅಮಾನ್ಯವೆಂದು ವಾಗ್ವಾದ

KannadaprabhaNewsNetwork | Published : May 4, 2024 12:34 AM

ಸಾರಾಂಶ

ಒರಿಜಿನಲ್ ಆಧಾರ ಕಾರ್ಡ್‌ ತೋರಿಸಿದರೆ ಮಾತ್ರ ಶಕ್ತಿ ಯೋಜನೆ ಟಿಕೆಟ್ ನೀಡುತ್ತೇನೆ, ಇಲ್ಲವಾದರೆ ಇಳಿದುಕೊಳ್ಳಿ ಎಂದು ನಿರ್ವಾಹಕ ಲಿಂಗರಾಜ್ ಮಹಿಳಾ ಪ್ರಯಾಣಿಕರಿಗೆ ಹೇಳಿದ್ದಾರೆ. ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಡಗೋಡ: ಶಕ್ತಿ ಯೋಜನೆಗೆ ಮೊಬೈಲ್‌ನಲ್ಲಿ ಆಧಾರ ಕಾರ್ಡ್‌ ತೋರಿಸಿದರೂ ಮಾನ್ಯವಾಗುತ್ತದೆ ಎಂದು ಸರ್ಕಾರದ ಆದೇಶವಿದ್ದರೂ ನಿರ್ವಾಹಕರೊಬ್ಬರು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು, ಮಹಿಳೆಯರಿಂದ ಹಣ ಪಡೆದು ಟಿಕೆಟ್ ನೀಡಿದ್ದು, ಆಕ್ರೋಶಗೊಂಡ ಪ್ರಯಾಣಿಕರು ಮುಂಡಗೋಡ ಬಸ್ ನಿಲ್ದಾಣದಲ್ಲಿ ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಶಿರಸಿ ಘಟಕದ ಹುಬ್ಬಳ್ಳಿ- ಸಾಗರ ಬಸ್‌ನಲ್ಲಿ, ಹುಬ್ಬಳ್ಳಿಯಿಂದ ಒಬ್ಬರು ಮುಂಡಗೋಡಕ್ಕೆ ಹಾಗೂ ಇನ್ನೊಬ್ಬರು ಶಿರಸಿಗೆ ಹೋಗುವ ಮಹಿಳಾ ಪ್ರಯಾಣಿಕರು ಮೊಬೈಲ್‌ನಲ್ಲಿ ಆಧಾರ ಕಾರ್ಡ್‌ ತೋರಿಸಿದ್ದಾರೆ. ಇದು ನಡೆಯುವುದಿಲ್ಲ. ಒರಿಜಿನಲ್ ಆಧಾರ ಕಾರ್ಡ್‌ ತೋರಿಸಿದರೆ ಮಾತ್ರ ಶಕ್ತಿ ಯೋಜನೆ ಟಿಕೆಟ್ ನೀಡುತ್ತೇನೆ, ಇಲ್ಲವಾದರೆ ಇಳಿದುಕೊಳ್ಳಿ ಎಂದು ನಿರ್ವಾಹಕ ಲಿಂಗರಾಜ್ ಮಹಿಳಾ ಪ್ರಯಾಣಿಕರಿಗೆ ಹೇಳಿದ್ದಾರೆ.

ಇದರಿಂದ ಅನಿವಾರ್ಯವಾಗಿ ಇಬ್ಬರು ಮಹಿಳೆಯರು ಹಣ ನೀಡಿ ಟಿಕೆಟ್ ಪಡೆದಿದ್ದಾರೆ. ಮುಂಡಗೋಡ ಬರುತ್ತಿದ್ದಂತೆ ಇಳಿದು ಬಸ್ ನಿಲ್ದಾಣ ನಿಯಂತ್ರಣಾಧಿಕಾರಿಯವರಲ್ಲಿ ವಿಚಾರಿಸಿದಾಗ, ಮಹಿಳಾ ಪ್ರಯಾಣಿಕರು ಮೊಬೈಲ್‌ನಲ್ಲಿ ಆಧಾರ ಕಾರ್ಡ್‌ ತೋರಿಸಿದರೂ ಮಾನ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು, ನಿರ್ವಾಹಕ ಲಿಂಗರಾಜ ನನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ನಿರ್ವಾಹಕ, ಚೆಕ್ಕಿಂಗ್ ಅಧಿಕಾರಿಗಳು ಬಂದಾಗ ಮೊಬೈಲ್ ಸ್ವಿಚ್ ಆಫ್‌ ಆದರೆ ನಾವೇನು ಮಾಡಬೇಕು ಎಂದು ವಾದ ಮಾಡಿದ್ದಾರೆ. ಇದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಬಸ್ ನಿಗದಿತ ಸ್ಥಳಕ್ಕೆ ತೆರಳಿತು.ಕಾನೂನು ಕ್ರಮ: ಯಾವುದೇ ಮಹಿಳೆಯರು ಮೊಬೈಲ್ ನಲ್ಲಿ ಆಧಾರ ಕಾರ್ಡ್‌ ತೋರಿಸಿದರೂ ಶಕ್ತಿ ಯೋಜನೆಯಡಿ ಶೂನ್ಯ ಮೊತ್ತದ ಟಿಕೆಟ್ ನೀಡಬೇಕೆಂದು ಸಾರಿಗೆ ಇಲಾಖೆಯಿಂದ ಸ್ಪಷ್ಟ ನಿರ್ದೇಶನವಿದೆ. ಇದರ ವಿರುದ್ದ ನಡೆದುಕೊಂಡ ಸಿಬ್ಬಂದಿಗೆ ನೋಟಿಸ್ ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ ವಿಭಾಗ ಕೆಎಸ್ಆರ್‌ಟಿಸಿ ನಿಯಂತ್ರಣಾಧಿಕಾರಿ ಶ್ರೀನಿವಾಸ ಕೆ.ಎಚ್. ತಿಳಿಸಿದರು.

Share this article