ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರು ತಾಲೂಕಿನ ಅರಿಯಡ್ಕ, ಕೆದಂಬಾಡಿ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರ ಮರಣದಿಂದ ತೆರವಾದ ತಲಾ ಒಂದು ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಚುನಾವಣೆಗೆ ಸಂಬಂಧಿಸಿದಂತೆ ನ.೬ರಂದು ಅಧಿಸೂಚನೆ ಪ್ರಕಟಗೊಂಡು ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗಳು ಪ್ರಾರಂಭಗೊಂಡಿದೆ. ನ.೨೩ರಂದು ಈ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.ಅವರು ಗುರುವಾರ ಪುತ್ತೂರಿನ ತಹಸೀಲ್ದಾರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಅರಿಯಡ್ಕ ಗ್ರಾ.ಪಂ.ನ ಮಾಡ್ನೂರು ೨ನೇ ವಾರ್ಡ್‌ನಲ್ಲಿ ಪ.ಜಾತಿಗೆ ಮೀಸಲಿರಿಸಿದ ಸ್ಥಾನದಲ್ಲಿ ಚುನಾಯಿತರಾಗಿದ್ದ ಶಂಕರ ಮಾಡಂದೂರು ಮತ್ತು ಕೆದಂಬಾಡಿ ಗ್ರಾ.ಪಂ. ವಾರ್ಡ್-೪ರಲ್ಲಿ ಸಾಮಾನ್ಯ ಮೀಸಲು ಸ್ಥಾನದಲ್ಲಿ ಚುನಾಯಿತರಾಗಿದ್ದ ಭಾಸ್ಕರ ರೈ ಮಿತ್ರಂಪಾಡಿ ಇವರಿಬ್ಬರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚುನಾವಣೆಗೆ ನ.೬ರಂದು ಅಧಿಸೂಚನೆ ಪ್ರಕಟಗೊಂಡಿದೆ. ನಾಮಪತ್ರ ಸಲ್ಲಿಸಲು ನ.೧೨ ಅಂತಿಮ ದಿನವಾಗಿದೆ. ರಜಾದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ ೧೧ರಿಂದ ಸಂಜೆ ೩ ಗಂಟೆ ಒಳಗಾಗಿ ನಾಮಪತ್ರ ಸಲ್ಲಿಸಬಹುದು. ನ.೧೩ ನಾಮಪತ್ರ ಪರಿಶೀಲನೆ, ನ.೧೫ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ನ.೨೩ ಮತದಾನ ಪ್ರಕ್ರಿಯೆಗಳು ಬೆಳಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯ ತನಕ ಮತದಾನ ನಡೆಯಲಿದೆ. ನ.೨೬ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಈ ತನಕ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದರು.
ಚುನಾವಣೆಯ ಮಾಸ್ಟರ್ ಟ್ರೈನರ್ ಪ್ರಶಾಂತ್ ನಾಯಕ್ ಮಾತನಾಡಿ, ಅರಿಯಡ್ಕ ಗ್ರಾ.ಪಂ.ನ ಮಾಡ್ನೂರು ೨ನೇ ವಾರ್ಡ್‌ನಲ್ಲಿ ಒಟ್ಟು ೧೫೩೭ ಮತದಾರರಿದ್ದು, ಎರಡು ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ. ನೋಟಾ ಮತದಾನಕ್ಕೆ ಅವಕಾಶವಿರುವುದಿಲ್ಲ. ಮೂರು ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿದೆ. ಆಯಾ ವಾರ್ಡ್‌ಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಅನ್ವಯವಾಗಲಿದೆ. ಮತಗಟ್ಟೆ ೨೦೦ ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ ೧೪೪ ಜಾರಿಯಾಗಲಿದೆ. ೧೦೦ ಮೀ. ವ್ಯಾಪ್ತಿಯ ಒಳಗಡೆ ಯಾವುದೇ ಪ್ರಚಾರ ನಡೆಸುವಂತಿಲ್ಲ. ಅಭ್ಯರ್ಥಿಗಳು ಪಕ್ಷದ ಚಿಹ್ನೆ ಅಥವಾ ಪತಾಕೆಗಳನ್ನು ಬಳಸುವಂತಿಲ್ಲ ಎಂದು ಮಾಹಿತಿ ನೀಡಿದರು. ಚುನಾವಣಾಧಿಕಾರಿಗಳ ನೇಮಕ: ಅರಿಯಡ್ಕ ಗ್ರಾ.ಪಂ.ಗೆ ಚುನಾವಣಾಧಿಕಾರಿಯಾಗಿ ಕೆಯ್ಯೂರು ಕೆಪಿಎಸ್‌ನ ಪ್ರಾಂಶುಪಾಲ ಇಸ್ಮಾಯಿಲ್, ಸಹಾಯಕ ಚುನಾವಣಾಧಿಕಾರಿಯಾಗಿ ನೆಟ್ಟಣಿಗೆ ಮುಡ್ನೂರು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ದೇವಿಪ್ರಕಾಶ್ ಶೆಟ್ಟಿ, ಕೆದಂಬಾಡಿ ಗ್ರಾ.ಪಂ.ಗೆ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪೊಡಿಯಾ, ಕುಂಬ್ರ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ರಸಾದ್ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಪ್ರಶಾಂತ್ ನಾಯಕ್ ತಿಳಿಸಿದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಉಪತಹಸೀಲ್ದಾರ್ ಸುಲೋಚನಾ ಪಿ.ಕೆ. ಇದ್ದರು.