- ಆಪರೇಷನ್ ಸಿಂಧೂರ ದಾಳಿಗೆ ಜಗತ್ತೇ ಕೊಂಡಾಡುತ್ತಿದೆ: ಕೇಂದ್ರ ಸಚಿವ ವಿ.ಸೋಮಣ್ಣ - - -
ಕಾಶ್ಮೀರದ ಪಹಲ್ಗಾಂನಲ್ಲಿ ಅಮಾಯಕ ಭಾರತೀಯರ ಜೀವ ತೆಗೆದು, ವಿಕೃತಿ ಮೆರೆದಿದ್ದ ಭಯೋತ್ಪಾದಕರ 9 ನೆಲೆಗಳನ್ನೇ ಧ್ವಂಸಗೈಯ್ಯುವ ಮೂಲಕ ಭಾರತದ ಹೆಮ್ಮೆಯ ಸೈನಿಕರು ಪರಾಕ್ರಮ ಮೆರೆದಿದ್ದಾರೆ. ಇಂತಹ ದಿಟ್ಟ ನಿರ್ಧಾರ ಕೈಗೊಳ್ಳಲು ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವಾ ರಾಜನಾಥ್ ಸಿಂಗ್ ಅವರನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅಭಿನಂದಿಸಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶಸ್ವಿ ಕಾರ್ಯಾಚರಣೆ ಕೈಗೊಂಡ ಹೆಮ್ಮೆಯ ಸೈನಿಕರು, ಕೇಂದ್ರ ಸರ್ಕಾರವನ್ನು ಇಡೀ ದೇಶದ ಜನತೆಯೇ ಅಭಿನಂದಿಸುತ್ತಿದೆ ಎಂದರು.ಧರ್ಮಾಧಾರಿತ ಭಯೋತ್ಪಾದನೆ ದಾಳಿ ಮಾಡಿದ ಹೇಡಿ ಉಗ್ರಗಾಮಿಗಳಿಗೆ ಮತ್ತು ಅಂತಹ ಉಗ್ರರಿಗೆ ಆಶ್ರಯ, ನೆರವು ನೀಡುವ ಪಾಕಿಸ್ತಾನಕ್ಕೆ ಇದು ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಪಾಠವಾಗಿದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರಗಾಮಿಗಳ ನೆಲೆಯ ಮೇಲೆ ದಾಳಿ ಮಾಡುವ ಮೂಲಕ ಉಗ್ರ ಸಂಹಾರ ಮಾಡಲಾಗಿದೆ. ಈ ಮೂಲಕ ಉಗ್ರರ ತಾಣಗಳನ್ನೇ ನಮ್ಮ ಯೋಧರು ನಾಶಪಡಿಸಿದ್ದಾರೆ ಎಂದು ಹೇಳಿದರು.
ಭಾರತದ ರಕ್ಷಣಾ ವ್ಯವಸ್ಥೆ ಅತ್ಯಂತ ಸದೃಢವಾಗಿದೆ. ಭಾರತ ಶಾಂತಿಪ್ರಿಯ ದೇಶ. ದೇಶದ ಮೇಲಿನ ಆಕಸ್ಮಿಕವಾಗಲೀ, ಉದ್ದೇಶ ಪೂರ್ವಕ ದಾಳಿಗಳನ್ನೇ ಆಗಲಿ ಭಾರತ ಎಂದಿಗೂ ಸಹಿಸುವುದಿಲ್ಲ. ಭಯೋತ್ಪಾದನೆ ಬುಡಸಮೇತ ಕೀಳಲು ಭಾರತ ಸನ್ನದ್ಧವಾಗಿದೆ. ಈ ಹಿನ್ನೆಲೆ ಭಾರತ ಸರ್ಕಾರ ಕಾರ್ಯಾಚರಣೆ ನಡೆಸಿದೆ. ಈಗಾಗಲೇ ಸರ್ವಪಕ್ಷಗಳ ಸಭೆಯಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಬೆಂಬಲ ವ್ಯಕ್ತವಾಗಿದೆ. ವಿಶ್ವದ ಅನೇಕ ರಾಷ್ಟ್ರಗಳು ಸಹ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ಸಂಪೂರ್ಣ ಸಹಕಾರ ನೀಡುತ್ತಿವೆ. ಭಯೋತ್ಪಾದನೆ ನಿಗ್ರಹಿಸುವ ಮೂಲಕ ವಿಶ್ವದಲ್ಲಿ ಶಾಂತಿ ನೆಲೆಸಲು ಪ್ರಧಾನಿ ನರೇಂದ್ರ ಮೋದಿ ಕೋಟೆ ಸುಭದ್ರವಾಗಿದೆ ಎಂದು ವಿ.ಸೋಮಣ್ಣ ಬಣ್ಣಿಸಿದರು.
- - -
- ವಿ.ಸೋಮಣ್ಣ, ಕೇಂದ್ರ ಸಚಿವ
-7ಕೆಡಿವಿಜಿ: