ಈಗಷ್ಟೇ ಮದುವೆ, ನಿಶ್ಚಿತಾರ್ಥವಾದ ಯೋಧರಿಗೆ ಸೇನೆ ಬುಲಾವ್‌

KannadaprabhaNewsNetwork |  
Published : May 12, 2025, 12:04 AM IST
ಬೆಳಗಾವಿ: | Kannada Prabha

ಸಾರಾಂಶ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ನಾಲ್ವರು ಯೋಧರು, ರಜೆ ಮೊಟಕುಗೊಳಿಸಿ ಪತ್ನಿ, ಕುಟುಂಬಸ್ಥರನ್ನು ಬಿಟ್ಟು ಸೇನೆ ಸೇರಲು ತಯಾರಾಗಿದ್ದಾರೆ.

ಬೆಳಗಾವಿ: ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಲು ಭಾರತೀಯ ಸೇನೆ ಸನ್ನದ್ಧವಾದ ಹಿನ್ನೆಲೆಯಲ್ಲಿ ರಜೆ ಮೇಲೆ ಬಂದಿದ್ದ ಯೋಧರಿಗೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳಿಂದ ಹಿಂದಿರುಗಿ ಬರುವಂತೆ ಕರೆ ಬಂದಿದೆ. ವಾರದ ಹಿಂದಷ್ಟೇ ಮದುವೆ ಮಾಡಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಗೂ ನಿಶ್ಚಿತಾರ್ಥ ಆಗಿದ್ದ ಯೋಧರು ಕರ್ತವ್ಯಕ್ಕೆ ಹಾಜರಾಗಲು ಸಜ್ಜಾಗಿದ್ದು, ಕರ್ತವ್ಯಕ್ಕೆ ಮರಳುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ನಾಲ್ವರು ಯೋಧರು, ರಜೆ ಮೊಟಕುಗೊಳಿಸಿ ಪತ್ನಿ, ಕುಟುಂಬಸ್ಥರನ್ನು ಬಿಟ್ಟು ಸೇನೆ ಸೇರಲು ತಯಾರಾಗಿದ್ದಾರೆ. ಕಳೆದ ವಾರವಷ್ಟೇ ಉಮೇಶ ದ್ಯಾಮಣ್ಣವರ, ಸಂಗಮೇಶ ದ್ಯಾಮಣ್ಣವರ ಸಹೋದರರು ವಿವಾಹವಾಗಿದ್ದಾರೆ. ಸೇನೆ ಬುಲಾವ್ ಹಿನ್ನೆಲೆ ಶನಿವಾರ ಉಮೇಶ ಜಮ್ಮುಗೆ ತೆರಳಿದ್ದರೆ, ಭಾನುವಾರ ಸಂಗಮೇಶ ಕೂಡ ಹೊರಟಿದ್ದಾರೆ. ಕಳೆದ ಐದಾರು ವರ್ಷಗಳಿಂದ ಧ್ಯಾಮಣ್ಣ ಸಹೋದರರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಕ್ಕಳು ದೇಶಸೇವೆ ಮಾಡುತ್ತಿದ್ದಾರೆ. ಹೋಗಿ ಯುದ್ಧದಲ್ಲಿ ಗೆಲುವು ಸಾಧಿಸಲಿ ಎಂದು ದ್ಯಾಮಣ್ಣವರ ತಾಯಿ ಆಶೀರ್ವದಿಸಿದರೆ, ಸಂಗಮೇಶ ಪತ್ನಿ ಕೂಡ ದೇಶ ಸೇವೆಗೆ ಪತಿಯನ್ನು ಹೆಮ್ಮೆಯಿಂದ ಕಳುಹಿಸಿ ಕೊಡುವೆ ಎನ್ನುತ್ತಾರೆ. ಕಳೆದ ವಾರ ಮದುವೆ ಆಗಿದ್ದ ಯೋಧ ಶಿವರಾಕ್ ಚಿಕ್ಕನ್ನವರ ಕೂಡ ಸೇನೆ ಬುಲಾವ್‌ ಹಿನ್ನೆಲೆ ಅಸ್ಸಾಂಗೆ ಹೋಗಲು ಸಿದ್ಧವಾಗಿದ್ದು, ಶಿವರಾಜ್ ಕಾರ್ಯಕ್ಕೆ ಅವರ ಪತ್ನಿ, ತಾಯಿ ಕೂಡ ಹೆಮ್ಮೆ ಮಾತುಗಳನ್ನಾಡಿದ್ದಾರೆ.

ಇಬ್ಬರು ಯೋಧರ ಪತ್ನಿಯರು ಮರಳಿ ತವರಿಗೆ

ಬೆಳಗಾವಿ: ಯುದ್ಧದ ಭೀತಿ ಹಿನ್ನೆಲೆಯಲ್ಲಿ ಧಾರವಾಡ ಮೂಲದ ಇಬ್ಬರು ಯೋಧರ ಪತ್ನಿಯರು ಮರಳಿ ತವರಿಗೆ ಬಂದಿಳಿದಿದ್ದಾರೆ. ಬೆಳಗಾವಿಯ ಬಸ್ ನಿಲ್ದಾಣಕ್ಕೆ ಬಂದಿಳಿದ ಯೋಧರ ಪತ್ನಿಯರು‌, ಅಲ್ಲಿನ ಸ್ಥಿತಿಗತಿಗಳ ಕುರಿತು ಮಾಧ್ಯಮಗಳ ಪ್ರಶ್ನೆ‌ಗೆ ಯಾವುದೇ ಕಾರಣಕ್ಕೂ ಅಲ್ಲಿನ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ್ದಾರೆ. ನಮ್ಮ ಗಂಡಂದಿರು ಫೋನ್‌ನಲ್ಲಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ, ಅದನ್ನು ನಾವು ಹಂಚಿಕೊಳ್ಳಲ್ಲ. ಸೈಬರ್ ಅಟ್ಯಾಕ್ ನಡೆಯುವ ಸಾಧ್ಯತೆ ಇದೆ. ಹಾಗಾಗೀ ನಾವು ಮಾಹಿತಿ ಹಂಚಿಕೊಳ್ಳಲ್ಲ ಎಂದು ತಿಳಿಸಿದ್ದಾರೆ. ನಾವು ಜಮ್ಮುವಿಗೆ ಹೋಗಿ ಒಂದು ತಿಂಗಳಾಗಿದೆ. ಸದ್ಯ ಅಲ್ಲಿ ರೆಡ್ ಅಲರ್ಟ್ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಯಾರು ಹೊರಗಡೆ ಹೋಗದ ಪರಿಸ್ಥಿತಿ ಇದೆ. ಸುರಕ್ಷತೆ ದೃಷ್ಟಿಯಿಂದ ವಾಪಸ್ ಬಂದಿದ್ದೇವೆ ಎಂದಷ್ಟೇ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!