-ಕೆಸ್ತೂರಿನಲ್ಲಿ ಕೃಷಿ ಇಲಾಖೆ ವಿಜ್ಞಾನಿಗಳೊಂದಿಗೆ ವಿಸ್ತರಣಾಧಿಕಾರಿಗಳ ಜಂಟಿ ಕ್ಷೇತ್ರ ಭೇಟಿ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ರೈತರು ಕೀಟನಾಶಕ ಸಿಂಪಡಿಸದೇ ಬೆಳೆಯುವ ಬೆಳೆಗೂ ಸಹ ಔಷಧಿ ಸಿಂಪಡಿಸುವ ಸಂದಿಗ್ಧ ಪರಿಸ್ಥಿತಿ ಒದಗಿ ಬಂದಿದೆ. ಆದ್ದರಿಂದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸಾಂದರ್ಭಿಕ ಶಿಫಾರಸ್ಸಿನಲ್ಲಿ ರೈತರು ಕೈಗೊಳ್ಳಬಹುದಾದ ಹತೋಟಿ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಕೆಲ ಮುಖ್ಯ ವಿಚಾರಗಳ ಬಗ್ಗೆ ಗಮನ ಹರಿಸಿ ಸೈನಿಕ ಹುಳುಗಳನ್ನು ಹತೋಟಿಗೆ ತರಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ರಾಜೇಶ್ವರಿ ತಿಳಿಸಿದರು.ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ತಾಲೂಕು ಕೃಷಿ ಇಲಾಖೆ ನೇತೃತ್ವದಲ್ಲಿ ಆತ್ಮ ಯೋಜನೆಯಡಿ ವಿಜ್ಞಾನಿಗಳೊಂದಿಗೆ ವಿಸ್ತರಣಾಧಿಕಾರಿಗಳ ಜಂಟಿ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಗಿ ಮತ್ತು ಮುಸುಕಿನ ಜೋಳ ತಾಲೂಕಿನ ಮುಖ್ಯ ಬೆಳೆಗಳಾಗಿವೆ. ಸದರಿ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು ಇದುವರೆಗೂ ತಾಲೂಕಿನಲ್ಲಿ 1441 ಹೆಕ್ಟರ್ ಮುಸುಕಿನ ಜೋಳ ಬಿತ್ತನೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಸ್ಪೊಡಾಪ್ಟರಾ ಜಾತಿಗೆ ಸೇರಿದ (ಸ್ಪೊಡಾಪ್ಟರಾ ಪ್ರುಜಿಫೆರಾ) ಸೈನಿಕ ಹುಳು ಬಾಧೆಯು ಮುಸುಕಿನ ಜೋಳ ಬೆಳೆಯಲ್ಲಿ ಹೆಚ್ಚಾಗಿ ಕಂಡು ಬಂದಿದೆ ಎಂದು ಹೇಳಿದರು.
ಕೆಸ್ತೂರು ಗ್ರಾಮದ ರೈತರಾದ ರಮೇಶ್ ಮತ್ತು ವೆಂಕಟಲಕ್ಷ್ಮಮ್ಮ ಅವರ ಮುಸುಕಿನ ಜೋಳದ ತೋಟಕ್ಕೆ ಜಿಲ್ಲೆಯ ಉಪ ಕೃಷಿ ನಿರ್ದೇಶಕ ಗಾಯತ್ರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಹನುಮಂತರಾಯ, ವಿಜ್ಞಾನಿಗಳಾದ ಡಾ ವೆಂಕಟೇಗೌಡ, ಡಾ.ಈಶ್ವರಪ್ಪ ಹಾಗೂ ಕೃಷಿ ಅಧಿಕಾರಿಗಳು ಭಾಗವಹಿಸಿದ್ದರು.