ಕರಾವಳಿಯ ಅಡಕೆ ತೋಟಗಳಲ್ಲೀಗ ಕಾಫಿಯ ಪರಿಮಳ: ಅಡಕೆ ಹಳದಿ ರೋಗ ಪೀಡಿತ ಪ್ರದೇಶಗಳಲ್ಲಿ ಪರ್ಯಾಯ ಬೆಳೆಯಾಗಿ ಕಾಫಿ ಬೆಳೆ

KannadaprabhaNewsNetwork | Published : Oct 9, 2024 1:36 AM

ಸಾರಾಂಶ

ಈಗ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಅಡಕೆ ಬೆಳೆಗಾರರೇ ಉಪ ಬೆಳೆಯಾಗಿ ಕಾಫಿ ಬೆಳೆಯಲು ಆರಂಭಿಸಿದ್ದಾರೆ. ಕಳೆದ ಒಂದು ವರ್ಷದಿಂದ ಅಡಕೆ ಬೆಳೆಗಾರರಲ್ಲಿ ಕಾಫಿ ಮಮತೆ ಜಾಸ್ತಿಯಾಗಿದ್ದು, ಸುಮಾರು 50ರಿಂದ 80 ಹೆಕ್ಟೇರ್‌ ವರೆಗೆ ಕಾಫಿ ಬೆಳೆ ಬೆಳೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಲೆನಾಡಿನ ವಾಣಿಜ್ಯ ಬೆಳೆ ಕಾಫಿ ಈಗ ಕರಾವಳಿಗೂ ಕಾಲಿಟ್ಟಿದೆ. ದ.ಕ.ಜಿಲ್ಲೆಯ ಅಡಕೆ ಕೃಷಿಕರ ತೋಟದಲ್ಲಿ ಕಾಫಿ ಪರಿಮಳ ಬೀರುತ್ತಿದೆ. ಅಡಕೆಯ ಬೇರುಹುಳ, ಎಲೆ ಚುಕ್ಕಿ ಇತ್ಯಾದಿ ರೋಗಗಳಿಂದ ಬೇಸತ್ತ ಬೆಳೆಗಾರರು ಈಗ ಪರ್ಯಾಯ ಬೆಳೆಯಾಗಿ ಕಾಫಿಯತ್ತ ವಾಲುತ್ತಿದ್ದಾರೆ.

ಚಿಕ್ಕಮಗಳೂರು, ಹಾಸನ, ಕೊಡಗು ಗಡಿ ಭಾಗ ಒಳಗೊಂಡ ದ.ಕ.ಜಿಲ್ಲೆಯ ತಪ್ಪಲು ಪ್ರದೇಶಗಳಲ್ಲಿ ಕಾಫಿ ತೋಟ ಕಂಡುಬರುತ್ತಿದ್ದು, ಈಗ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಅಡಕೆ ಬೆಳೆಗಾರರೇ ಉಪ ಬೆಳೆಯಾಗಿ ಕಾಫಿ ಬೆಳೆಯಲು ಆರಂಭಿಸಿದ್ದಾರೆ. ಕಳೆದ ಒಂದು ವರ್ಷದಿಂದ ಅಡಕೆ ಬೆಳೆಗಾರರಲ್ಲಿ ಕಾಫಿ ಮಮತೆ ಜಾಸ್ತಿಯಾಗಿದ್ದು, ಸುಮಾರು 50ರಿಂದ 80 ಹೆಕ್ಟೇರ್‌ ವರೆಗೆ ಕಾಫಿ ಬೆಳೆ ಬೆಳೆಯುತ್ತಿದ್ದಾರೆ.

ನರೇಗಾದಲ್ಲಿ ಪರ್ಯಾಯ ಬೆಳೆಗೆ ನೆರವು:

ಮಹಾತ್ಮಾಗಾಂಧಿ ಉದ್ಯೋಗ ಖಾತರಿ (ನರೇಗ) ಯೋಜನೆಯಲ್ಲಿ ಅಡಕೆಯಲ್ಲದೆ, ಇತರೆ ಉಪ ಬೆಳೆಗಳ ಉತ್ತೇಜನಕ್ಕೆ ಅವಕಾಶ ಇದೆ. ಮೂರು ಬಗೆಯ ಕಾಫಿ ಬೆಳೆಸಲು 31 ಸಾವಿರ ರು.ನಿಂದ 1.11 ಲಕ್ಷ ರು. ವರೆಗೆ ಸಬ್ಸಿಡಿ ಸೌಲಭ್ಯ ಇದೆ. ಮುಖ್ಯವಾಗಿ ಅಡಕೆ ಹಳದಿ ಎಲೆ ರೋಗ ಪೀಡಿತ ಪ್ರದೇಶಗಳಲ್ಲಿ ಪರ್ಯಾಯ ಬೆಳೆ ಬೆಳೆಸಲು ನೆರವಾಗಲು ಈ ಅವಕಾಶ ಕಲ್ಪಿಸಲಾಗಿದೆ. ಪರ್ಯಾಯ ಬೆಳೆಗಳ ಸಾಲಿಗೆ ಕಾಫಿ ಕೂಡ ಸೇರಿಸಿರುವುದು ಗಮನಾರ್ಹ. ಈ ಬಾರಿ ಪರ್ಯಾಯ ಬೆಳೆಗೆ ನೆರವಾಗಲು ದ.ಕ.ಜಿಲ್ಲೆಗೆ ಸರ್ಕಾರದಿಂದ 30 ಲಕ್ಷ ರು. ಅನುದಾನ ಬಿಡುಗಡೆಯಾಗಿದೆ.

ಕಾಫಿ ಬೋರ್ಡ್‌ ತಂಡ ಭೇಟಿ:

ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗಗಳಲ್ಲಿ ಅಡಕೆ ಬೆಳೆಗಾರರು ಕಾಫಿ ಬೆಳೆಯನ್ನು ಬೆಳೆಸುತ್ತಿದ್ದಾರೆ. ಕಾಫಿ ಬೆಳೆಯ ಸಮಗ್ರ ನಿರ್ವಹಣೆಗೆ ತೋಟಗಾರಿಕಾ ಇಲಾಖೆಯಿಂದ ಯಾವುದೇ ಸವಲತ್ತು ಇಲ್ಲ. ಅದೇನಿದ್ದರೂ ಕಾಫಿ ಬೋರ್ಡ್‌ನ ನೆರವು ಸಿಗಬೇಕು. ಅದಕ್ಕಾಗಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಕಾಫಿ ಬೋರ್ಡ್‌ಗೆ ಮನವಿ ಮಾಡಿದ್ದಾರೆ. ಹೀಗಾಗಿ ಕಾಫಿ ಬೋರ್ಡ್‌ ಅಧಿಕಾರಿಗಳು ಈಗ ಕರಾವಳಿಗೆ ಭೇಟಿ ನೀಡಿ ಕಾಫಿ ಬೆಳೆಯ ಪ್ರದೇಶ, ಫಸಲು, ಫಲವತ್ತತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಕಾಫಿ ಬೆ‍ಳೆಗೆ ತಂಪಗಿನ ಹವಾಮಾನ ಬೇಕು. ದ.ಕ.ಜಿಲ್ಲೆಯಲ್ಲಿ ಅಂತಹ ಹವಮಾನ ಬೆಟ್ಟದ ತಪ್ಪಲು ಪ್ರದೇಶದಲ್ಲಿ ಮಾತ್ರವಲ್ಲ ಬೇರೆ ಕಡೆಯೂ ಕಂಡುಬರುತ್ತದೆಯೇ ಎಂಬುದನ್ನು ಈ ತಂಡ ಕಂಡುಕೊಳ್ಳಲಿದೆ. ಆ ಬಳಿಕ ಕರಾವಳಿಯಲ್ಲೂ ಕಾಫಿ ಬೆಳೆ ಪ್ರದೇಶದ ಸ್ಥಾನಮಾನ ನೀಡುವುದಕ್ಕೆ ನಿರ್ಧರಿಸಲಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಬಾಕ್ಸ್‌----

ಶೇ.30ರಷ್ಟು ಕೊಳೆರೋಗ ಹಾನಿ

ಈ ಬಾರಿ ವಿಪರೀತ ಮಳೆಯಿಂದಾಗಿ ಈವರೆಗೆ ದ.ಕ.ಜಿಲ್ಲೆಯಲ್ಲಿ ಸುಮಾರು ಶೇ.20ರಿಂದ 30ರಷ್ಟು ಅಡಕೆ ತೋಟಗಳಲ್ಲಿ ಕೊಳೆರೋಗ ಹಾನಿ ಸಂಭವಿಸಿದೆ ಎನ್ನುವುದು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಲೆಕ್ಕಾಚಾರ.

ಕೊಳೆರೋಗ ಸಂಭವಿಸಿದ ಬಗ್ಗೆ ಆಯಾ ತಾಲೂಕುಗಳಲ್ಲಿ ಮಾಹಿತಿ ಇದೆ. ಪ್ರತ್ಯೇಕವಾಗಿ ಬೆಳೆಗಾರರಿಂದ ದೂರು ಬಂದಿಲ್ಲ. ಆದರೂ ಸಮೀಕ್ಷೆ ಕೈಗೊಳ್ಳಲಾಗುವುದು. ಈಗ ಮುಂಗಾರು ಮುಕ್ತಾಯವಾಗಿರುವುದರಿಂದ ಔಷಧ ಸಿಂಪರಣೆಗೆ ಸಬ್ಸಿಡಿ ನಿಲ್ಲಿಸಲಾಗಿದೆ. ಅದರ ಬದಲು ಇನ್ನು ಒಂದೆರಡು ತಿಂಗಳಲ್ಲಿ ಕಾಡುವ ಅಡಕೆ ತೋಟಗಳ ಹಳದಿ ಎಲೆ ರೋಗಕ್ಕೆ ಔಷಧ ಸಿಂಪರಣೆಗೆ ನೆರವು ನೀಡಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ...............

ಈ ಬಾರಿ ಕೊಳೆರೋಗ ಶೇ.30ರಷ್ಟು ಆವರಿಸಿದ ಮಾಹಿತಿ ಇದೆ. ಹಳದಿ ಎಲೆ ರೋಗ ಬಾಧಿತ ಪ್ರದೇಶಗಳಲ್ಲಿ ಪರ್ಯಾಯ ಬೆಳೆಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ದ.ಕ.ಜಿಲ್ಲೆಯಲ್ಲಿ ಕಾಫಿ ಬೆಳೆಗೆ ನೆರವು ನೀಡುವ ನಿಟ್ಟಿನಲ್ಲಿ ಕಾಫಿ ಬೋರ್ಡ್‌ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

-ಮಂಜುನಾಥ್‌, ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ, ದ.ಕ.

.

Share this article