ಕೊಪ್ಪದ ತೋಮರ ಶೆಟ್ಟಿ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಮಕ್ಕಳ ಸಂತೆ; ಸಾರ್ವಜನಿಕರಿಂದ ಮೆಚ್ಚುಗೆ
ತಾಲೂಕಿನ ಕೆಳಪೇಟೆ ತೋಮರ ಶೆಟ್ಟಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳ ಸಂತೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿ ಒಂದು ಲಕ್ಷಕ್ಕೂ ಅಧಿಕ ವ್ಯಾಪಾರ ವಹಿವಾಟು ನಡೆಯುವ ಮೂಲಕ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತು.
ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ, ಸ್ವಾವಲಂಬನೆ ಹಾಗೂ ಗಣಿತದ ಪ್ರಾಯೋಗಿಕ ಕೌಶಲ್ಯ ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಈ ಸಂತೆಯಲ್ಲಿ ವಿವಿಧ ಬಗೆಯ ಸುಮಾರು 60 ಮಳಿಗೆಗಳನ್ನು ತೆರೆಯಲಾಗಿತ್ತು. ವಿಶೇಷವಾಗಿ ಮಕ್ಕಳು ತಮ್ಮ ಮನೆಗಳಲ್ಲೇ ಸ್ವತಃ ಬೆಳೆದ ತರಕಾರಿ, ಸೊಪ್ಪು, ಹಣ್ಣುಗಳು, ಕಬ್ಬು ಸೇರಿದಂತೆ ವಿವಿಧ ಸಾವಯವ ಕೃಷಿ ಉತ್ಪನ್ನ ಗಳನ್ನು ಮಾರಾಟಕ್ಕಿಟ್ಟಿದ್ದರು. ಇದರೊಂದಿಗೆ ಬಗೆಬಗೆಯ ತಿಂಡಿ-ತಿನಿಸುಗಳು ಹಾಗೂ ಕರಕುಶಲ ವಸ್ತುಗಳ ಮಳಿಗೆಗಳು ಗ್ರಾಹಕರನ್ನು ಆಕರ್ಷಿಸಿದವು.ಸ್ಥಳೀಯ ಸಾರ್ವಜನಿಕರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮಕ್ಕಳೊಂದಿಗೆ ಚೌಕಾಸಿ ಮಾಡಿ ವಸ್ತು ಗಳನ್ನು ಖರೀದಿಸುವ ಮೂಲಕ ಪುಟಾಣಿ ವ್ಯಾಪಾರಿಗಳಿಗೆ ಪ್ರೋತ್ಸಾಹ ನೀಡಿದರು. ಮಕ್ಕಳ ಉತ್ಸಾಹ ಮತ್ತು ಶಿಕ್ಷಕರ ವ್ಯವಸ್ಥಿತ ಆಯೋಜನೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಶ್ರೀಮತಿ ಪದ್ಮಾವತಿ ರಮೇಶ್ ಮಾತನಾಡಿ ಮಕ್ಕಳ ಸಂತೆ ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ಮಕ್ಕಳ ಪ್ರಾಯೋಗಿಕ ಕಲಿಕೆಗೆ ಪೂರಕವಾದ ಉತ್ತಮ ವೇದಿಕೆಯಾಗಿದೆ. ಇಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಂವಹನ ಕಲೆ ಹಾಗೂ ವ್ಯವಹಾರ ಜ್ಞಾನ ವೃದ್ಧಿಸುತ್ತದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ ಎಂದರು.