- ಸಚಿವ ಕೆ.ಎಸ್.ಬಸವಂತಪ್ಪಗೆ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಒಕ್ಕೂಟ ಮನವಿ
ಕನ್ನಡಪ್ರಭ ವಾರ್ತೆ ದಾವಣಗೆರೆ ಮಂತ್ರಾಲಯದಲ್ಲಿ ಕರ್ನಾಟಕದ ಭಕ್ತರಿಗೆ ಸುಸಜ್ಜಿತ ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ದಾವಣಗೆರೆ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಒಕ್ಕೂಟದಿಂದ ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಒಕ್ಕೂಟದ ಗೌರವಾಧ್ಯಕ್ಷ ಬುಸ್ನೂರು ಗುರುಬಸಪ್ಪ ಈ ಸಂದರ್ಭ ಮಾತನಾಡಿ, ಮಂತ್ರಾಲಯದಲ್ಲಿರುವ ಕರ್ನಾಟಕ ವಸತಿ ಗೃಹವನ್ನು ಕಳೆದ 4 ದಶಕಗಳ ಹಿಂದೆ ಅಂದರೆ, 1984ರ ನವೆಂಬರ್ 25ರಂದು ರಾಜ್ಯ ಮುಜುರಾಯಿ ಇಲಾಖೆ ಸಚಿವರಾದ ಅಮರನಾಥ ಶೆಟ್ಟಿ 5 ಎಕರೆ ಜಾಗದಲ್ಲಿ 50 ರೂಮ್‌ಗಳ ಸಮುಚ್ಛಯ ವಸತಿ ಗೃಹಗಳ ಕಟ್ಟಡವನ್ನು ಕರ್ನಾಟಕದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಭಕ್ತರ ತಂಗುವಿಕೆಗಾಗಿ ನಿರ್ಮಿಸಿದ್ದು ಸರಿಯಷ್ಟೆ. ಆದರೆ, ಕಳೆದ ಕೆಲ ವರ್ಷಗಳಿಂದ ವಸತಿ ಸೌಲಭ್ಯ ಇಲ್ಲದೇ 20 ರೂಂಗಳನ್ನು ಬಂದ್ ಮಾಡಿ, ಉಳಿದ 30 ರೂಂಗಳನ್ನು ಮಾತ್ರವೇ ಬಳಕೆ ಮಾಡುತ್ತಿದ್ದಾರೆ. ಸದರಿ ರೂಂಗಳಲ್ಲೂ ಸಹ ಭಕ್ತರಿಗೆ ತಂಗಲು ಯಾವುದೇ ರೀತಿಯ ಸೌಲಭ್ಯ ಇಲ್ಲದಂತಾಗಿದೆ ಎಂದು ದೂರಿದರು.ಕರ್ನಾಟಕದಿಂದ ಮಂತ್ರಾಲಯಕ್ಕೆ ಹೋಗಿ ಬರುವ ಭಕ್ತಾದಿಗಳಿಗೆ ವಸತಿ ಸೌಲಭ್ಯಕ್ಕಾಗಿ ಕರ್ನಾಟಕ ವಸತಿ ಗೃಹವನ್ನು ದುರಸ್ತಿಪಡಿಸಿ, ಅಗತ್ಯ ಮೂಲಸೌಲಭ್ಯ ಕಲ್ಪಿಸುವಂತೆ ಸಚಿವರಿಗೆ ಮನವಿ ಮಾಡಿದರು.
- - -
ಮಂತ್ರಾಲಯದಲ್ಲಿ ಕರ್ನಾಟಕದ ಭಕ್ತರಿಗೆ ಸುಸಜ್ಜಿತ ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ದಾವಣಗೆರೆ ಸಾರ್ವಜನಿಕ ಹಿತರಕ್ಷಣಾ ಒಕ್ಕೂಟದಿಂದ ಸಚಿವ ಕೆ.ಎಸ್.ಬಸವಂತಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.