- ಅಧ್ಯಕ್ಷ ಶಾಮನೂರು ಟಿ.ಬಸವರಾಜ್ ಸೂಚನೆ । ಜಿಲ್ಲಾಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಜಿಲ್ಲೆಯಲ್ಲಿ ಬಸ್ ಸಂಚಾರ ಇಲ್ಲದ ಗ್ರಾಮಗಳು ಹಾಗೂ ಅಗತ್ಯವಿರುವ ಮಾರ್ಗಗಳಿಗೆ ಸಂಚಾರ ವ್ಯವಸ್ಥೆ ಒದಗಿಸಿ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ತಾಕೀತು ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಬುಧವಾರ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಚನ್ನಗಿರಿ ತಾಲೂಕಿನ ಅಮ್ಮನಗುಡ್ಡ, ಕೆರೆಬಿಳಚಿ, ಹೊಸೂರು ಹೀಗೆ ಹಲವಾರು ಕಡೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಸಂಚಾರವೇ ಇಲ್ಲ. ಇಂಥ ಗ್ರಾಮಗಳ ಗುರುತಿಸಿ. ಬಸ್ ಸಂಚರಿಸಲು ಸಾಧ್ಯವಿರುವ ಎಲ್ಲ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಹೀಗಾದಲ್ಲಿ ಆಯಾ ಗ್ರಾಮದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ, ಬಸ್‌ಗಳ ಕೊರತೆ ಇದೆ. ಆದ್ದರಿಂದ 51 ಬಸ್ ಅವಶ್ಯಕತೆ ಇದೆ ಎಂದು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೂ ಇರುವ ಸಂಪನ್ಮೂಲ ಬಳಸಿಕೊಂಡು ಶಕ್ತಿ ಯೋಜನೆ ಆರಂಭ ಆದಾಗಿನಿಂದ ಶೇ.90ರಷ್ಟು ಸಮಸ್ಯೆಗಳನ್ನು ಪರಿಗಣಿಸಿ ಪರಿಹರಿಸಲಾಗಿದೆ. ಅಗತ್ಯವಿರುವ ಮಾರ್ಗಗಳನ್ನು ಗುರುತಿಸಿ, ಸಂಚಾರ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿನ ಪಡಿತರ ವಿತರಣೆ ವೇಳೆ ತೂಕ ವ್ಯತ್ಯಾಸ, ಎಲೆಕ್ಟ್ರಾನಿಕ್ ವೈಟ್ ಮೆಷಿನ್ ಸರ್ಟಿಫೈ, ನಗರ ಮತ್ತು ಅಗತ್ಯವಿರುವ ವಿವಿದ ಗ್ರಾಮ, ಬಸ್ ಕೊರೆತ ಇರುವ ಮಾರ್ಗಗಳಿಗೆ ಬಸ್ ಸಂಚಾರ ಕಲ್ಪಿಸುವುದು ಸೇರಿದಂತೆ ಪಂಚಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಕುರಿತು ಚರ್ಚಿಸಲಾಯಿತು.
ಜಿಪಂ ಸಿಇಒ ಗಿಟ್ಟೆ ಮಾಧವ ವಿಠಲ ರಾವ್ ಮಾತನಾಡಿ, ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ವೇಳೆ ತೂಕ ಕಡಿಮೆ ಮಾಡಿ, ವಿತರಣೆ ಮಾಡುವುದು ಕಂಡುಬಂದಲ್ಲಿ ನೇರವಾಗಿ ಇಲಾಖೆಗೆ ಮಾಹಿತಿ ನೀಡಿ. ಮಾಹಿತಿ ಆಧರಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ತೂಕ ಯಂತ್ರದ ಕುರಿತು ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಮುಂದಿನ ಸಭೆಯಲ್ಲಿ ವೇ ಮಷಿನ್ ಸರ್ಟಿಫೈ ಮಾಡುವ ಅಧಿಕಾರಿಗಳನ್ನು ಕರೆದು ಸೂಕ್ತ ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ಅಧಿಕಾರಿಗಳು ಹೆಚ್ಚಿನ ಜಾಗೃತಿ ವಹಿಸಬೇಕು ಎಂದರು.ಬಸ್ ಕೊರತೆ ಇರುವ ಮಾರ್ಗಗಳನ್ನು ಗುರುತಿಸಿ, ಇರುವ ಸಂಪನ್ಮೂಲವನ್ನೇ ಬಳಸಿ ಬಸ್ ಸಂಚಾರ ಸಾಧ್ಯತೆ ಇರುವೆಡೆ, ಅಗತ್ಯತೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸಬೇಕು ಸಾರ್ವಜನಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆಗೆ ಸೂಕ್ತ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಸಮಿತಿ ಮುಂದಿನ ಸಭೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜನೆ ಮಾಡಿ, ಮತ್ತಷ್ಟು ಜಾಗೃತಿ ಮೂಡಿಸಬೇಕು. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಮೂಲಕ ಮಾದರಿ ಜಿಲ್ಲೆಯನ್ನಾಗಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಯುವನಿಧಿ ಯೋಜನೆಯ ನೋಂದಣಿ ಆರಂಭದ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಸಮಿತಿ ಉಪಾಧ್ಯಕ್ಷರಾದ ಕೆ.ಎನ್.ಮಂಜುನಾಥ್, ನಂಜನಾಯ್ಕ, ರಾಜೇಶ್ವರಿ, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು, ಗ್ಯಾರಂಟಿ ಸಮಿತಿ ಸದಸ್ಯರು ಇದ್ದರು.
- - -(ಬಾಕ್ಸ್) * ಶಕ್ತಿ ಯೋಜನೆ:
ಶಕ್ತಿ ಯೋಜನೆಯಡಿ 2023ರ ಜೂನ್‌ನಿಂದ 2025ರ ಜುಲೈವರೆಗೆ 98576283 ಫಲಾನುಭವಿಗಳಿಗೆ ₹28.5 ಕೋಟಿ ಪ್ರಯಾಣ ದರ ವೆಚ್ಚ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಜುಲೈ 2023ರಿಂದ ಡಿಸೆಂಬರ್ 2024ರ ವರೆಗೆ ಜಿಲ್ಲೆಯ 21770105 ಫಲಾನುಭವಿಗಳಿಗೆ ₹34.75467515 ಮಂಜೂರಾಗಿದೆ. ₹34.63334790 ಮೊತ್ತ ಪಾವತಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.* ಗೃಹಜ್ಯೋತಿ:
ಗೃಹಜ್ಯೋತಿಯಡಿ ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 502667 ಫಲಾನುಭವಿಗಳ ಸಂಖ್ಯೆಯಾಗಿದೆ. ಈ ಪೈಕಿ ಗೃಹಜ್ಯೋತಿ ಯೋಜನೆಯಡಿ 59678 ಫಲಾನುಭವಿಗಳು ನೋಂದಣಿಯಾಗಿದ್ದು, ಇದಕ್ಕೆ ₹35.36 ಲಕ್ಷ ಅನುದಾನ ಬೇಡಿಕೆ ಇದೆ. ಅದರಲ್ಲಿ ₹24.30 ಲಕ್ಷ ಪಾವತಿಸುವ ಮೂಲಕ ಶೇ.89ರಷ್ಟು ಪ್ರಗತಿ ಸಾಧಿಸಿದೆ.* ಗೃಹಲಕ್ಷ್ಮಿ:
2023ರ ಆಗಸ್ಟ್‌ನಿಂದ 2025ರ ಮೇ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾದ 372977 ಫಲಾನುಭವಿಗಳಿಗೆ ₹1400.10 ಕೋಟಿ ಪಾವತಿ ಮಾಡಲಾಗಿದೆ. ಹಾಗೆಯೇ 2023ನೇ ಸಾಲಿನಲ್ಲಿ ನೋಂದಣಿಯಾಗಿ ಮರಣ ಹೊಂದಿದ 202 ಫಲಾನುಭವಿಗಳಿಗೆ ಜಮೆಯಾದ ₹24.96 ಲಕ್ಷ ಮೊತ್ತವನ್ನು ಸರ್ಕಾರಕ್ಕೆ ಮರುಪಾವತಿ ಮಾಡಲಾಗಿದೆ.ಯುವನಿಧಿ:
ಯುವನಿಧಿ ಯೋಜನೆಯಡಿ ಜಿಲ್ಲಾದ್ಯಂತ 8536 ಪದವಿ ಮತ್ತು 168 ಡಿಪ್ಲೊಮಾ ಪದವಿ ಫಲಾನುಭವಿಗಳು ಸೇರಿ ಒಟ್ಟು 8704 ವಿದ್ಯಾರ್ಥಿಗಳಿಗೆ 2025ರ ಮೇ ಅಂತ್ಯಕ್ಕೆ ₹1.95 ಕೋಟಿ ಮೊತ್ತ ಪಾವತಿಸಲಾಗಿದೆ.- - -
-6ಕೆಡಿವಿಜಿ36: ದಾವಣಗೆರೆ ಜಿಪಂ ಸಭಾಂಗಣದಲ್ಲಿ ಶಾಮನೂರು ಟಿ.ಬಸವರಾಜ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.