ಕನ್ನಡಪ್ರಭ ವಾರ್ತೆ ಮಂಡ್ಯ
ಮಳವಳ್ಳಿ ತಾಲೂಕಿನ ಗೋಕುಲ ವಿದ್ಯಾ ಸಂಸ್ಥೆಯಲ್ಲಿ ವಿಷಹಾರ ಸೇವನೆಯಿಂದ ಚಿಕಿತ್ಸೆ ಪಡೆಯುತ್ತಿರುವ ಮೇಘಾಲಯ ರಾಜ್ಯದ ೨೨ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ೧೪ ವಿದ್ಯಾರ್ಥಿಗಳು ಗುಣಮುಖರಾದ ನಂತರ ಶೈಕ್ಷಣಿಕ ವರ್ಷದ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಮೇಘಲಾಯ ರಾಜ್ಯದ ೨೨ ವಿದ್ಯಾರ್ಥಿಗಳು ೧ ರಿಂದ ೯ ನೇ ತರಗತಿಯೊಳಗಿದ್ದು, ಗುಣಮುಖರಾದ ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರ ಮಾಡಲಾಗುವುದು. ಬಾಲ ಮಂದಿರದಲ್ಲಿ ಅವರಿಗೆ ವಾಸ್ತವ್ಯ ಹಾಗೂ ವೈದ್ಯರ ಸಲಹೆಯಂತೆ ಆಹಾರ ಒದಗಿಸಲಾಗುವುದು ಎಂದರು.
ಶಿಕ್ಷಣ ಇಲಾಖೆ ಅವರು ಮೇಘಾಲಯ ರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು. ಇದಲ್ಲದೇ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವೈದ್ಯರ ಸಲಹೆ ಹಾಗೂ ಪೋಷಕರ ಒಪ್ಪಿಗೆ ಪಡೆದು ಪರೀಕ್ಷೆ -೧ ಬರೆಯಲಿ ಇಲ್ಲವಾದಲ್ಲಿ ಪರೀಕ್ಷೆ-೨ ಬರೆಯಲು ವ್ಯವಸ್ಥೆ ಮಾಡಿ ಎಂದರು.ಮಕ್ಕಳ ಆಧಾರ್ ಕಾರ್ಡ್ ಮುಖ್ಯ:
ಚಿಕಿತ್ಸೆ ಪಡೆಯುತ್ತಿರುವ ಮೇಘಾಲಯ ವಿದ್ಯಾರ್ಥಿಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರ ಮಾಡಿದ ನಂತರ ಮೇಘಾಲಯ ಸರ್ಕಾರ ನಿಯೋಜಿಸಿರುವ ಅಧಿಕಾರಿಗಳು ಮಕ್ಕಳ ಪೋಷಕರನ್ನು ಅವರ ಆಧಾರ್ ಕಾರ್ಡ್ ಗುರುತಿನ ಚೀಟಿಯೊಂದಿಗೆ ಆಗಮಿಸಿ ಮಕ್ಕಳ ರಕ್ಷಣಾ ಘಟಕಕ್ಕೆ ಪತ್ರ ನೀಡಿ ನಂತರ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಇದಲ್ಲದೇ, ಮೇಘಾಲಯ ರಾಜ್ಯದ ವಿದ್ಯಾರ್ಥಿಗಳನ್ನು ಗೋಕುಲ ಶಾಲೆಗೆ ದಾಖಲೆ ಮಾಡುವ ಸಂದರ್ಭದಲ್ಲಿ ನೀಡಿರುವ ದಾಖಲೆ ವಶಪಡಿಸಿಕೊಂಡು ತನಿಖೆ ನಡೆಸುವಂತೆ ತಿಳಿಸಿದರು.ಪೋಷಕರ ಸಭೆ ಹಾಗೂ ಪರೀಕ್ಷೆ ನಡೆಸಿ:
ಶೈಕ್ಷಣಿಕ ಸಾಲು ಅಂತ್ಯವಾಗುತ್ತಿದ್ದು, ಗೋಕಲ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸ್ಥಳೀಯ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಸಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತಂದು ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿ, ಅಗತ್ಯವಿದ್ದಲ್ಲಿ ಶಿಕ್ಷಣ ಇಲಾಖೆಯಿಂದಲೂ ಸಿಬ್ಬಂದಿ ನಿಯೋಜಿಸಿ. ಇನ್ನೊಂದು ಭಾಗದಲ್ಲಿ ಶಾಲೆಗೆ ನೋಟಿಸ್ ನೀಡುವ ಕೆಲಸ ನಡೆಯುತಿರಲಿ ಎಂದರು.ಜಿಲ್ಲೆಯ ವಸತಿ ಶಾಲೆಗಳ ಪರಿಶೀಲನೆ:
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಸತಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ವ್ಯವಸ್ಥೆಗಳು, ಮಕ್ಕಳಿಗೆ ನೀಡಲಾಗುತ್ತಿರುವ ಆಹಾರ ಕುರಿತು ವರದಿ ನೀಡಲು ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಸಮಿತಿ ರಚಿಸಲಾಗುವುದು ಎಂದರು.ಸರ್ಕಾರದ ಆಧೀನದಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ ಯಾವುದೇ ಕಾರಣಕ್ಕೂ ಹೊರಗಿನ ವ್ಯಕ್ತಿ ಹಾಗೂ ಸಂಸ್ಥೆಯಿಂದ ಆಹಾರ ಪಡೆಯುವಂತಿಲ್ಲ. ಯಾವುದಾದರೂ ದೂರು ಬಂದಲ್ಲಿ ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.
ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದರು.ಹೊರಗಿನ ಊಟ ಪ್ರೋತ್ಸಾಹಿಸಿದರೆ ಶಿಸ್ತು ಕ್ರಮ: ಸಿಇಒ;
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ಊಟದ ಸಂದರ್ಭದಲ್ಲಿ ಬೇರೆ ದಾನಿಗಳು ಆಹಾರ ನೀಡುವುದಾಗಿ ತಿಳಿಸುವುದು. ಶಾಲೆ ಅವರನ್ನು ಪ್ರೋತ್ಸಾಹಿಸುವುದು ಕಂಡುಬಂದಲ್ಲಿ ಶಿಸ್ತು ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.ಗೋಕುಲ ವಿದ್ಯಾ ಸಂಸ್ಥೆಗೆ ಪರವಾನಗಿ ನೀಡುವಾಗ ಅಥವಾ ನವೀಕರಣ ಮಾಡುವ ಸಂದರ್ಭದಲ್ಲಿ ಪರಿಶೀಲನೆ ಮಾಡಿದ ಅಧಿಕಾರಿಯ ವಿವರವನ್ನು ಒದಗಿಸುವಂತೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರವಾನಗಿ ನವೀಕರಣ ಅಥವಾ ಪರವಾನಗಿ ನೀಡುವ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪರಿಶೀಲನೆ ಕಟ್ಟುನಿಟ್ಟಾಗಿ ನಡೆಸಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಮಾತನಾಡಿ, ಮಕ್ಕಳ ಆರೋಗ್ಯದ ಮೇಲೆ ಈಗಾಗಲೇ ನಿಗಾ ವಹಿಸಲು ಸಿಬ್ಬಂದಿಯನ್ನು ಮಿಮ್ಸ್ ಆಸ್ಪತ್ರೆಗೆ ನಿಯೋಜಿಸಲಾಗಿದೆ. ಬಾಲಕರ ಬಾಲಮಂದಿರದಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಬಾಲಮಂದಿರದ ಪಕ್ಕದ ಕಟ್ಟಡದಲ್ಲಿ ಮಕ್ಕಳಿಗೆ ಬೇಕಿರುವ ವ್ಯವಸ್ಥೆಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೇಘಾಲಯ ರಾಜ್ಯದ ಶಿಕ್ಷಣ ಇಲಾಖೆಯ ಪೀಟರ್ ಸುನ್, ರುಡಿ ಕ್ರಿಯಲ್, ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಸುಮಿತ್ರಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ ಇತರರಿದ್ದರು.