ಶಿವಮೊಗ್ಗ: ಭ್ರಷ್ಟಚಾರ ಆರೋಪದಲ್ಲಿ ಮಂತ್ರಿಗಿರಿಯನ್ನೇ ಕಳೆದುಕೊಂಡ ಬಿಜೆಪಿ ಮಾಜಿ ಮಂತ್ರಿಗಳು ಈಗ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ಎಂದು ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೆಪಿಸಿಸಿ ಜಿಲ್ಲಾ ವಕ್ತಾರ ಆಯನೂರು ಮಂಜುನಾಥ್ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಶ್ವರಪ್ಪನವರ ಮೇಲೆ 40 ಪರ್ಸೆಂಟ್ ಕಮಿಷನ್ ಆಪಾದನೆ ಇತ್ತು. ಕಾಂಗ್ರೆಸ್‌ನವರು ನಮಗಿಂತ ಡಬಲ್ ತಿನ್ನುತ್ತಿದ್ದಾರೆ ಎಂದು ಹೇಳುವ ಮೂಲಕ ನಾವು ಭ್ರಷ್ಟಾಚಾರ ಮಾಡಿದ್ದೇವೆ ಎಂದು ಅವರೇ ಮಾಧ್ಯಮದ ಎದುರು ಒಪ್ಪಿಕೊಂಡಿದ್ದಾರೆ. ಮೊದಲು ಈಶ್ವರಪ್ಪ ಅವರನ್ನು ಬಂಧಿಸಿ, ತನಿಖೆ ನಡೆಸಿದರೆ ಭ್ರಷ್ಟಾಚಾರ ಎಷ್ಟು ಎಂಬುದು ಹೊರಬರಲಿದೆ ಎಂದು ಹರಿಹಾಯ್ದರು. ಬಿಜೆಪಿ ಆಡಳಿತ ಅವಧಿಯಲ್ಲಿ ₹1000 ಕೋಟಿ ಸಾಲ ಮಾಡಿದ್ದನ್ನು ಕಾಂಗ್ರೆಸ್ ತೀರಿಸಬೇಕಿದೆ. ಕಾಮಗಾರಿಗಳ ಟೆಂಡರ್ ವೇಳೆ ತಮ್ಮೆಲ್ಲ ಪಾಲನ್ನು ಬಿಜೆಪಿ ನಾಯಕರು ತೆಗೆದುಕೊಂಡಿದ್ದಾರೆ. ಈಗ ಬಿಲ್ ಪಾವತಿ ಮಾಡುವ ವೇಳೆ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಾಡಿದ ಮಾಜಿ ಮಂತ್ರಿ ಇದೀಗ ಕಾಂಗ್ರೆಸ್ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಮನೆಬಾಗಿಲಿಗೆ ಹೋಗಿ, ₹50 ಕೋಟಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಭ್ರಷ್ಟಾಚಾರದ ಹಣವನ್ನು ಇಟ್ಟುಕೊಂಡು ಈ ಸರ್ಕಾರ ಮೂರು ತಿಂಗಳು ಇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಭ್ರಷ್ಟಾಚಾರದ ಹಣವನ್ನು ಕೇಂದ್ರ ಸರ್ಕಾರದಿಂದ ತಂದಿದ್ದಿರೋ ಅಥವಾ ತಾವೇ ಇಟ್ಟುಕೊಂಡಿದ್ದೋ ಸ್ಪಷ್ಟಪಡಿಸಲಿ ಎಂದು ಹೇಳಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಇಬ್ರಾಹಿಂ ಮತ್ತು ಕುಮಾರಸ್ವಾಮಿ ಅವರದು ಆಂತರಿಕ ವಿಚಾರ. ಐಎನ್‌ಡಿಐಎ ಒಕ್ಕೂಟಕ್ಕೆ ಅವರು ಬಂದರೆ ಸ್ವಾಗತ ಎಂದರು. - - - ಟಾಪ್ ಕೋಟ್ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರನ್ನು ಬ್ಲಾಕ್ ಮೇಲ್ ಮಾಡಿ ಮುಜುಗರ ಉಂಟುಮಾಡಿದವರು ಇಂದು ಸರ್ಕಾರ ಬೀಳಿಸುವ ಯತ್ನ ನಡೆಸಿದ್ದಾರೆ - ಆಯನೂರು ಮಂಜುನಾಥ್, ಕಾಂಗ್ರೆಸ್ ಮುಖಂಡ - - - -18ಎಸ್‌ಎಂಜಿಕೆಪಿ01: ಆಯನೂರು ಮಂಜುನಾಥ್