ದೊಡ್ಡಬಳ್ಳಾಪುರ: ಗ್ರಾಮೀಣ ಪ್ರದೇಶಗಳಿಗೆ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ಸತತ 8 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆರೋಪಿಸಿದೆ. ಅವೈಜ್ಞಾನಿಕ ವಿದ್ಯುತ್ ಪೂರೈಕೆ ಖಂಡಿಸಿ ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನೆಲದಾಂಜನೇಯ ಸ್ವಾಮಿ ದೇವಾಲಯದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ, ನಗರ ಬೆಸ್ಕಾಂ ಕಚೇರಿ ಬಳಿ ಸೇರಿತು. ಈ ವೇಳೆ ಮಾತನಾಡಿದ ಮುಖಂಡರು, ರೈತರು ಸಾಲ ಸೋಲ ಮಾಡಿ ಬೆಳೆ ಇಟ್ಟರೆ, ಒಂದು ಕಡೆ ಮಳೆ ಇಲ್ಲದೆ ಬರಗಾಲ ಇನ್ನೊಂದೆಡೆ ನೀರು ಹಾಯಿಸಲು ಸರಿಯಾದ ವಿದ್ಯುತ್ ಇಲ್ಲದೆ, ಬೆಳೆದ ಬೆಳೆ ಒಣಗುತ್ತಿದೆ. ರೈತರು ಕೇಳುವ ವಿದ್ಯುತ್ ಯಾವುದೇ ಮೋಜು-ಮಸ್ತಿಗಾಗಿ ಅಲ್ಲ, ದೇಶದ 140 ಕೋಟಿ ಜನಸಂಖ್ಯೆಗೆ ಆಹಾರ ಒದಗಿಸಲು, ಕೈಗಾರಿಕೆಗಳಿಂದ ಸಾಧ್ಯವಿಲ್ಲ. ಇದನ್ನು ತಿಳಿಯದ ಸರ್ಕಾರಗಳಿಂದಾಗಿ ರೈತರು ಮಾಡುವ ಕೆಲಸ ಬಿಟ್ಟು ಬೀದಿಗೆ ಬಂದು ಹೋರಾಟ ಮಾಡಿ ವಿದ್ಯುತ್ ಪಡೆಯಬೇಕೆಂಬ ಅನಿವಾರ್ಯತೆ ಉಂಟಾಗಿದೆ. ಈ ಪರಿಸ್ಥಿತಿಗೆ ಸರ್ಕಾರಗಳಿಗೆ ನಾಚಿಕೆಯಾಗಬೇಕು ಎಂದು ಟೀಕಿಸಿದರು. ಕೃಷಿಗೆ ಮೊದಲು ಬೇಕಾಗಿರುವುದು ವಿದ್ಯುತ್ ಇದನ್ನು ಸಮರ್ಪಕವಾಗಿ ನೀಡಿದರೆ ಮಾತ್ರ ರೈತರು ದೇಶಕ್ಕೆ ಬೇಕಾಗಿರುವ ಆಹಾರ ಒದಗಿಸಲು ಸಾಧ್ಯ, ಇದನ್ನು ಸರ್ಕಾರ ಗಮನಿಸಬೇಕು. ಕೆಲವು ದಿನಗಳಿಂದ ವಿದ್ಯುತ್ ಪೂರೈಕೆಯನ್ನು ಸರಿಯಾಗಿ ಮಾಡದೇ ರೈತರಿಗೆ ತೀವ್ರ ತೊಂದರೆ ಕೊಡುತ್ತಿದೆ ಎಂದರು. ರೈತರ ಕೃಷಿ ಪಂಪ್ ಸೆಟ್‌ಗೆ ಪ್ರತಿ ದಿನ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುತ್ತಿದ್ದ ಸರ್ಕಾರ ದಿಢೀರನೇ ಕೇವಲ 2 ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದು ಹಾಗೂ ನಿರಂತರ ಜ್ಯೋತಿಗೂ ಸಹ ರಾತ್ರಿ 6 ರಿಂದ 9 ರವರೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದರಿಂದ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೂ ಮತ್ತು ದಿನವಿಡಿ ದುಡಿದು ರೈತ ರಾತ್ರಿ ಮನೆಗೆ ಬಂದು ಅಡುಗೆ ಮಾಡಿ ತಿನ್ನಲು ಸಹ ನೆಮ್ಮದಿ ಇಲ್ಲದಂತೆ ಮಾಡಿದ್ದಾರೆ. ಈ ಕೂಡಲೇ ಸರಿಪಡಿಸಿ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮುಖಂಡರು, ಕಾರ್ಯಕರ್ತರು ಹಾಜರಿದ್ದರು. 18ಕೆಡಿಬಿಪಿ4- ದೊಡ್ಡಬಳ್ಳಾಪುರದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ವಿರೋಧಿಸಿ ಬೆಸ್ಕಾಂ ಮುಂದೆ ರೈತ ಸಂಘದಿಂದ ಬೃಹತ್ ಪ್ರತಿಭಟನೆ ನಡೆಯಿತು.