7 ತಿಂಗಳು ಶಿರಸಿ-ಕುಮಟಾ ರಸ್ತೆ ಸಂಪೂರ್ಣ ಬಂದ್‌

KannadaprabhaNewsNetwork |  
Published : Oct 19, 2023, 12:45 AM IST
ಶಿರಸಿ ಕುಮಟಾ ರಸ್ತೆ ಕುರಿತಂತೆ ಶಿರಸಿಯಲ್ಲಿ ಉಪವಿಬಾಗಾಧಿಕಾರಿ ಆರ್ ದೇವರಾಜ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು.  | Kannada Prabha

ಸಾರಾಂಶ

ಇದುವರೆಗೂ ಭಾರೀ ಮತ್ತು ಸರಕು ವಾಹನಗಳಿಗೆ ಮಾತ್ರ ನಿರ್ಬಂಧ ವಿಧಿಸಲಾಗಿದ್ದ ಶಿರಸಿ-ಕುಮಟಾ ರಸ್ತೆ ಇನ್ನು ಏಳು ತಿಂಗಳು ಕಾಲ ಸಾರ್ವಜನಿಕರಿಗೂ ಸಂಚಾರಕ್ಕೆ ಸ್ಥಗಿತವಾಗಲಿದೆ. ಶಿರಸಿಯಲ್ಲಿ ಉಪವಿಭಾಗಾಧಿಕಾರಿ ಆರ್. ದೇವರಾಜ ಈ ವಿಷಯ ತಿಳಿಸಿದ್ದಾರೆ.

ಶಿರಸಿ:

ಇದುವರೆಗೂ ಭಾರೀ ಮತ್ತು ಸರಕು ವಾಹನಗಳಿಗೆ ಮಾತ್ರ ನಿರ್ಬಂಧ ವಿಧಿಸಲಾಗಿದ್ದ ಶಿರಸಿ-ಕುಮಟಾ ರಸ್ತೆ ಇನ್ನು ಏಳು ತಿಂಗಳು ಕಾಲ ಸಾರ್ವಜನಿಕರಿಗೂ ಸಂಚಾರಕ್ಕೆ ಸ್ಥಗಿತವಾಗಲಿದೆ. ಶಿರಸಿಯಲ್ಲಿ ಉಪವಿಭಾಗಾಧಿಕಾರಿ ಆರ್. ದೇವರಾಜ ಈ ವಿಷಯ ತಿಳಿಸಿದ್ದಾರೆ.

ಹೆದ್ದಾರಿ ವಿಸ್ತರಣೆ ಸಂಬಂಧ ನ. 1ರಿಂದ 2024 ಮೇ 31ರ ವರೆಗೆ ಶಿರಸಿ-ಕುಮಟಾ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತ ಮಾಡಲಾಗುತ್ತದೆ. ಶಿರಸಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ಮಾತನಾಡಿ, ಶಿರಸಿ-ಕುಮಟಾ ರಸ್ತೆ ಕಾಮಗಾರಿಗೆ ವೇಗ ನೀಡಲಾಗುತ್ತಿದೆ. ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಸ್ತೆ ಗುತ್ತಿಗೆ ಕಂಪನಿ ಆರ್.ಎನ್.ಎಸ್. ಇಸ್ಫ್ರಾಸ್ಟ್ರಕ್ಚರ್ ಕೋರಿಕೆ ಮೇರೆಗೆ ಈ ಮಾರ್ಗದಲ್ಲಿ ಸಂಚಾರ ಸ್ಥಗಿತ ಮಾಡಲಾಗುತ್ತಿದೆ ಎಂದರು.

ಈಗಾಗಲೇ ಶಿರಸಿ ವಿಭಾಗ ವ್ಯಾಪ್ತಿಯ 33 ಕಿಮೀ ರಸ್ತೆಯಲ್ಲಿ 25 ಕಿಮೀ ಆಗಿದೆ. 2.84 ಕಿಮೀ ಒಂದು ಕಡೆ ರಸ್ತೆಯಾಗಿದೆ. ಉಳಿದಂತೆ 6.18 ಕಿಮೀ ರಸ್ತೆ ಆಗಬೇಕಿದೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ವಿಸ್ತರಣೆ, 9 ಸೇತುವೆ ನಿರ್ಮಾಣ ಆಗಬೇಕಿದೆ ಎಂದರು.‌

ಮಾರ್ಗ ಸಂಪೂರ್ಣ ಸ್ಥಗಿತ ಮಾಡುವ ಕಾರಣ ಪರ್ಯಾಯ ಮಾರ್ಗಗಳ ಬಳಕೆ ಅನಿವಾರ್ಯ. ಹಾಗಾಗಿ ಅಂಕೋಲಾ-ಶಿರಸಿ ಸಂಪರ್ಕಕ್ಕೆ ಯಲ್ಲಾಪುರ ಮಾರ್ಗ, ಹೊನ್ನಾವರ-ಶಿರಸಿಗೆ ಮಾವಿನಗುಂಡಿ ಮೂಲಕ ಹಾಗೂ ಕುಮಟಾ-ಶಿರಸಿಗೆ ಬಡಾಳ್ ಘಟ್ಟದ ಮೂಲಕ ಮತ್ತು ವಡ್ಡಿ ಘಟ್ಟದ ಮೂಲಕ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಶಿರಸಿ ಮಾರಿಕಾಂಬಾ ಜಾತ್ರೆ ಸಮಯದಲ್ಲಿ ಶಿರಸಿ-ಕುಮಟಾ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಈಗಾಗಲೇ ಈ ಮಾರ್ಗ ಶಿರಸಿಯಿಂದ ಬಂಡಲದ ವರೆಗೆ ಬಹುತೇಕ ಪೂರ್ಣಗೊಂಡಿದೆ. ಇಲ್ಲಿಯ ಅಮ್ಮಿನಳ್ಳಿ ಬಳಿ ಅರ್ಧಬರ್ಧ ಆಗಿದ್ದ ಕಾಮಗಾರಿಯನ್ನೂ ಈಗ ಕೈಗೆತ್ತಿಕೊಳ್ಳಲಾಗಿದೆ. ಕಸಗೆ ಬಳಿ ಮತ್ತು ರಾಗಿಹೊಸಳ್ಳಿ ಬಳಿ ರಸ್ತೆ ನಿರ್ಮಾಣವಾಗಬೇಕಿದೆ. ಕುಮಟಾ ತಾಲೂಕಿನಲ್ಲಿ ಕತಗಾಲ ವರೆಗೆ ಒಂದು ಭಾಗದಲ್ಲಿ ರಸ್ತೆ ನಿರ್ಮಾಣವಾಗಿದ್ದು, ಇನ್ನೊಂದೆಡೆ ಇನ್ನು ಮೇಲಷ್ಟೇ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ತಡೆಗೋಡೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಈ ಎಲ್ಲ ಕಾಮಗಾರಿಗಳನ್ನು ವೇಗವಾಗಿ ನಡೆಸುವ ಕಾರಣ ಈ ಮಾರ್ಗದಲ್ಲಿ ಸಂಚಾರವನ್ನು ತಾತ್ಕಾಲಿಕ ಸ್ಥಗಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ