ಕಾರಟಗಿ: ನನ್ನ ಮುಂದಿನ ಗುರಿ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ದೇಶವನ್ನು ಮತ್ತೊಮ್ಮೆ ಹೆಮ್ಮೆಪಡುವಂತೆ ಮಾಡುತ್ತೇನೆ ಎಂದು ೧೯ನೇ ಏಷ್ಯನ್ ಗೇಮ್ಸ್‌ನ ವಿಜೇತೆ ನಂದಿನಿ ಅಗಸರ ಹೇಳಿದರು.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ೧೯ನೇ ಏಷ್ಯನ್ ಗೇಮ್ಸ್‌ನ ಮಹಿಳೆಯರ ಹೆಪ್ಟಾಥ್ಲಾನ್ ೮೦೦ ಮೀಟರ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ನಂದಿನಿ ಅಗಸರ ಅವರನ್ನು ಪಟ್ಟಣದಲ್ಲಿ ಮಂಗಳವಾರ ತಾಲೂಕು ಕಸಾಪ, ಮಡಿವಾಳ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ೧೯ನೇ ಏಷ್ಯನ್ ಗೇಮ್ಸ್‌ನಲ್ಲಿ ನಾನು ಪದಕ ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ. ನನ್ನ ಮತ್ತು ಕುಟುಂಬಕ್ಕೆ ಅದೊಂದು ದೊಡ್ಡ ಕ್ಷಣವಾಗಿತ್ತು. ಕೊನೆಗೆ ನನ್ನ ದೇಶಕ್ಕಾಗಿ ಪದಕ ಗೆದ್ದಿರುವುದು ನನಗೆ ಖುಷಿ ಮತ್ತು ಹೆಮ್ಮೆ ತಂದಿದೆ. ಪ್ರಧಾನಿ ಮೋದಿ ಖುದ್ದು ಅಭಿನಂದಿಸಿದ್ದು ನನ್ನ ಜೀವನದ ಮರೆಯಲಾಗದ ಕ್ಷಣ. ಈ ಸಾಧನೆಗೆ ಪ್ರೋತ್ಸಾಹಿಸಿದ ನನ್ನ ತಂದೆ-ತಾಯಿಗೆ, ತರಭೇತಿ ವೇಳೆ ಕಾಳಜಿ ಆಸಕ್ತಿವಹಿಸಿ ಶಕ್ತಿ, ಸ್ಫೂರ್ತಿ ತುಂಬಿದ ತರಬೇತುದಾರರು ಮತ್ತು ಮಾರ್ಗದರ್ಶಕರಿಗೆ ಕೃತಜ್ಞತೆ ಸಲ್ಲಿಸಿದರು.ಈಗ ಸಂಗಾರೆಡ್ಡಿಯಲ್ಲಿರುವ ತೆಲಂಗಾಣ ಸಮಾಜ ಕಲ್ಯಾಣ ವಸತಿ ಪದವಿ ಕಾಲೇಜಿನಲ್ಲಿ ಬಿಬಿಎ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿ ಶಿಕ್ಷಣ ಪಡೆಯುತ್ತಿರುವುದಾಗಿ ಹೇಳಿದರು.ಈ ವೇಳೆ ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿ, ನಂದಿನಿ ಅಗಸರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಮನೆ ಮಗಳಾಗಿದ್ದರೂ ಕೊಪ್ಪಳ ಜಿಲ್ಲೆಯ ಮೊಮ್ಮಗಳಾಗಿದ್ದಾಳೆ. ಪ್ರತಿಷ್ಠಿತ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದುಕೊಂಡು ಜಿಲ್ಲೆಗೆ ಆ ಮೂಲಕ ಕಾರಟಗಿಗೂ ಕೀರ್ತಿ ತಂದಿದ್ದಾಳೆ. ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ನಂದಿನಿಯ ಸಾಧನೆಯೇ ಮಾದರಿ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ್ ರ್‍ಯಾವಳದ್ ಮಾತನಾಡಿ, ಕ್ರೀಡಾ ಮನೋಭಾವ ಮತ್ತು ಶ್ರೇಷ್ಠತೆ ರೂಢಿಸಿಕೊಂಡಿರುವ ನಂದಿನಿ, ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾಗವಹಿಸಿ ಇನ್ನು ಹೆಚ್ಚಿನ ಪದಕಗಳನ್ನು ತಮ್ಮದಾಗಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಪ್ರಮುಖರಾದ ಚಂದ್ರು ನಾಗನಹಳ್ಳಿ, ಹೊನ್ನಪ್ಪ ಬಿಎಸ್‌ಎನ್‌ಎಲ್, ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಮುಖ್ಯಗುರು ಮಹಾಂತೇಶ್ ಗದ್ದಿ, ವೀರೇಶ್ ಮ್ಯಾಗೇರಿ, ಅಮರೇಶ್ ಪಾಟೀಲ್, ಗಿರೀಶ್ ಯರಡೋಣಾ, ಬಸವರಾಜ್ ಸಿದ್ದಾಪುರ, ಸೂರಿ ಭೋವಿ, ಶರಣಪ್ಪ ಕಾಯಿಗಡ್ಡಿ, ರಮೇಶ್ ಜನೌಷಧ, ಶಿವು ಮಾಸ್, ರಾಮಣ್ಣ, ಮರಿಯಪ್ಪ , ವೀರೇಶ್, ರಾಜಾ, ದೇವಣ್ಣ, ಶರಣಪ್ಪ, ಆನಂದ್, ದೇವರಾಜ್, ಯಮನೂರು,ಸುಖಮನಿ ಇನ್ನಿತರರು ಇದ್ದರು.