ಚನ್ನಪಟ್ಟಣ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ರಾಜ್ಯ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ತೆರಳುತ್ತಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಶುಕ್ರವಾರ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಹುಲುವಾಡಿ ದೇವರಾಜು, ಮುಡಾ ಹಗರಣದಲ್ಲಿ ರಾಜ್ಯದ ಮುಖ್ಯಮಂತ್ರಿಗಳೇ ನೇರ ಪಾಲುದಾರರಾಗಿದ್ದಾರೆ. ಇದು ನೂರಾರು ಕೋಟಿ ರು.ಗಳ ಬೃಹತ್ ಹಗರಣವಾಗಿದೆ. ಹಗರಣವನ್ನು ಮುಚ್ಚಿಹಾಕುವ ಹುನ್ನಾರವನ್ನು ಕಾಂಗ್ರೆಸ್ ಸರ್ಕಾರ ನಡೆಸಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಖಂಡನೀಯ. ಬರೀ ಹಗರಣಗಳ ಸುಳಿಯಲ್ಲಿ ಸಿಲುಕಿರುವ ಈ ಸರ್ಕಾರದಿಂದ ರಾಜ್ಯದ ಪರಿಸ್ಥಿತಿ ಆಧೋಗತಿಗೆ ಇಳಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಎಸ್.ರಾಜು, ನಗರ ಘಟಕದ ಶಿವು, ಮುಖಂಡರಾದ ಶಿವಲಿಂಗಯ್ಯ, ಮೈತ್ರಿಗೌಡ, ನಿಂಗೇಗೌಡ, ಮಲ್ಲೇಶ್, ಶಿವಕುಮಾರ್, ಸತೀಶ್ ಸೇರಿ ಹಲವರು ಇದ್ದರು.