ಕನ್ನಡಪ್ರಭ ವಾರ್ತೆ ಉಡುಪಿ
ಛತ್ತೀಸ್ ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರನ್ನು ಬಂಧಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.ಇತ್ತೀಚೆಗೆ ಛತ್ತೀಸ್‌ಗಢದ ದುರ್ಗ್ ರೈಲು ನಿಲ್ದಾಣದಲ್ಲಿ ಇಬ್ಬರು ಕಥೊಲಿಕ ಕ್ರೈಸ್ತ ಧರ್ಮ ಭಗಿನಿಯರನ್ನು ಬಂಧಿಸಿರುವುದಲ್ಲದೆ ಕೆಲವೊಂದು ಬಲಪಂಥೀಯ ಸಂಘಟನೆಗಳಿಂದ ದೈಹಿಕ ಹಿಂಸೆ ನಡೆಸಿರುವ ಘಟನೆ ಅತೀವ ನೋವನ್ನುಂಟುಮಾಡಿದೆ.
ಈ ಇಬ್ಬರು ಧರ್ಮಭಗಿನಿಯರು ಮೂವರು ಯುವತಿಯರೊಂದಿಗೆ ಪ್ರಯಾಣಿಸುತ್ತಿದ್ದು, ಯುವತಿಯರು ಕಾನೂನು ಬದ್ಧವಾಗಿ ವಯಸ್ಸಿಗೆ ಬಂದವರಾಗಿದ್ದು ಹೆತ್ತವರಿಂದ ಸೂಕ್ತ ಅನುಮತಿ ಹೊಂದಿ ತೆರಳುತ್ತಿದ್ದರೂ ಕೂಡ ಕೆಲವೊಂದು ವ್ಯಕ್ತಿಗಳ ಕುಮ್ಮಕ್ಕಿನಿಂದ ಕಾನೂನು ಮೀರಿ ಬಂಧಿಸಲಾಗಿದೆ. ಪೊಲೀಸರು ಆ ಯುವತಿಯರ ಪೋಷಕರಿಗೆ ತಮ್ಮ ಮಕ್ಕಳನ್ನು ಭೇಟಿಯಾಲು ಕೂಡ ಅವಕಾಶ ನೀಡದಿರುವುದು ಮಾನವೀಯತೆ ಹಾಗೂ ನ್ಯಾಯದಾನದ ಮೇಲೆ ನಡೆಸಿದ ದಾಳಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.ಮೂಲ ಎಫ್ಐಆರ್‌ನಲ್ಲಿ ಒಳಗೊಂಡಿರದ ‘ಛತ್ತೀಸ್‌ಗಢ ಧರ್ಮ ಸ್ವಾತಂತ್ರ್ಯ ಕಾಯ್ದೆ, 1968’ರ ಸೆಕ್ಷನ್ 4ನ್ನು ಇಬ್ಬರು ಧರ್ಮ ಭಗಿನಿಯರ ಮೇಲೆ ಹೇರಿರುವುದು ಕಳವಳಕಾರಿ ಸಂಗತಿಯಾಗಿದೆ. ಇದು ಕಾನೂನು ಪ್ರಕ್ರಿಯೆಯ ದುರ್ವಿಯೋಗ ನಡೆಸಿರುವುದು ಸ್ಪಷ್ಟವಾಗಿದೆ. ಸಾಮೂಹಿಕ ಒತ್ತಡಕ್ಕೆ ಒಳಗಾಗಿ ನ್ಯಾಯಪಾಲಕರಾಗಬೇಕಾದ ಅಧಿಕಾರಿಗಳು ತಮ್ಮ ಧರ್ಮೋಚಿತ ಮತ್ತು ಸಂವಿಧಾನಬದ್ಧ ಕರ್ತವ್ಯವನ್ನು ಕೈಬಿಟ್ಟಿರುವುದು ಅತೀ ದುಃಖದ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ದಶಕಗಳ ಹಿಂದೆಂದಿನಿಂದ ದೇಶದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವೇ ಅರ್ಪಿಸಿಕೊಂಡಿರುವ ಧರ್ಮಭಗಿನಿಯರು ಮಾನ್ಯತೆ ಮತ್ತು ರಕ್ಷಣೆಗೆ ಅರ್ಹರಾಗಿದ್ದಾರೆ ಹೊರತು ಅವಮಾನ ಮತ್ತು ಹಿಂಸೆಗಲ್ಲ. ಹಿಂಸೆ, ಮತ್ತು ನ್ಯಾಯದ ಮೇಲೆ ಮೌನ ಇಂತಹ ಸಮಯಗಳಲ್ಲಿ ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತೀವ್ರವಾಗಿ ಹದಗೆಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಬಂಧನದಲ್ಲಿರುವ ಧರ್ಮಭಗಿನಿಯರು ಹಾಗೂ ಮೂವರು ಯುವತಿಯರನ್ನು ತಕ್ಷಣ ಮತ್ತು ಬಿಡುಗಡೆ ಮಾಡಬೇಕು, ಸುಳ್ಳು ಮತ್ತು ದ್ವೇಷಪೂರಿತ ದೂರು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಪೊಲೀಸರ ವೈಫಲ್ಯಕ್ಕೆ ಸಂಬಂಧಿಸಿದಂತೆ ಸೂಕ್ತ ನೈತಿಕ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.