ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟಿದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ದಲಿತ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಮುಂಜಾಗ್ರತೆ ಕ್ರಮವಾಗಿ ಬಂಧಿಸಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟಿದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ದಲಿತ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಸೋಮವಾರ ಮುಂಜಾಗ್ರತೆ ಕ್ರಮವಾಗಿ ಬಂಧಿಸಿದರು. ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸಾಧನಾ ಸಮಾವೇಶಕ್ಕೆ ಆಗಮಿಸುತ್ತಿದ್ದ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ತೋರಿಸಲು ದಲಿತ ಮುಖಂಡರು ಮುಂದಾಗಿದ್ದರು. ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಸಂಚಾಲಕ ಅಂದಾನಿ ಸೋಮನಹಳ್ಳಿ, ಮುಖಂಡರಾದ ಆನಂದ, ಮರಳಿಗ ಶಿವರಾಜು, ಸಂಘಟನೆಯ ಮಹಿಳೆಯರು ಸೇರಿದಂತೆ ಸುಮಾರು 75 ಮಂದಿ ಕಾರ್ಯಕರ್ತರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡರು.
ಪೊಲೀಸರ ಬಂಧನದ ಮುನ್ಸೂಚನೆ ಅರಿತಿದ್ದ ದಲಿತ ಮುಖಂಡರು ಕೆಎಸ್‌ಆರ್ ಟಿಸಿಬಸ್ ನಿಲ್ದಾಣ, ಪುರಸಭೆ, ಸೋಮನಹಳ್ಳಿ ಬಳಿ ಪ್ರತ್ಯೇಕವಾಗಿ ತಂಡ ರಚಿಸಿಕೊಂಡು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಸಿಎಂಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು.
ಈ ಬಗ್ಗೆ ಮಾಹಿತಿ ಅರಿತಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ವರಿಷ್ಠಾಧಿಕಾರಿ ತಿಮ್ಮಯ್ಯ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಮದ್ದೂರು ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಗೌಡ ನೇತೃತ್ವದಲ್ಲಿ ಸಿಎಂ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡುವುದನ್ನು ತಡೆಯ ಪೊಲೀಸರ ವಿಶೇಷ ತಂಡ ರಚನೆ ಮಾಡಲಾಗಿತ್ತು. ಪೊಲೀಸರ ತಂಡ ಸೋಮನಹಳ್ಳಿಯ ಸಾಧನಾ ಸಮಾವೇಶದ ಸ್ಥಳಕ್ಕೆ ತೆರಳುತ್ತಿದ್ದ ದಲಿತ ಮುಖಂಡರನ್ನು ಮಾರ್ಗ ಮಧ್ಯ ವಶಕ್ಕೆ ತೆಗೆದುಕೊಂಡು ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣ ಮಂಟಪ ವೊಂದರಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಗೃಹಬಂಧನ ದಲ್ಲಿಟ್ಟಿದ್ದು, ಸಂಜೆ ವೇಳೆಗೆ ವೈಯಕ್ತಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.