ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಐವರ ಬಂಧನ

KannadaprabhaNewsNetwork | Updated : Feb 07 2025, 12:26 PM IST

ಸಾರಾಂಶ

ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಕಲಬುರಗಿ ನಗರದ ವಿವಿಧ ಬಡಾವಣೆಗಳ ನಿವಾಸಿಗಳಾದ ಐವರು ಯುವಕರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

 ಕಲಬುರಗಿ :  ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಕಲಬುರಗಿ ನಗರದ ವಿವಿಧ ಬಡಾವಣೆಗಳ ನಿವಾಸಿಗಳಾದ ಐವರು ಯುವಕರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಆಝಾದಪುರದ ಉಮರ್ ಕಾಲನಿ ನಿವಾಸಿಗಳಾದ ಗುಲಾಮ್ ನಬಿ ಅಲಿಯಾಸ್ ಬಿಲಾಲ್(21), ಮುಹಮ್ಮದ್ ಪರ್ವೇಶ್(27), ಶೇಕ್ ಶೋಯೆಬ್(22), ಸೈಯದ್ ಕದೀರ್(24), ಗರೀಬ್ ನವಾಝ್ ಕಾಲನಿ ನಿವಾಸಿ ಅಸ್ಲಂ (24) ಬಂಧಿತ ಆರೋಪಿಗಳು.

ಮೊದಲ ಆರೋಪಿಯಾಗಿರುವ ಗುಲಾಮ್ ನಬಿ ವಿರುದ್ಧ ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಯಲ್ಲಿ ಕಲಂ 28 ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಳಿದ ನಾಲ್ವರು ಆರೋಪಿಗಳ ವಿರುದ್ಧ ಕಲಂ 129 ಬಿಎನ್‌ಎಸ್‌ಎಸ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೆಲವು ಯುವಕರು ಕೈಯಲ್ಲಿ ಮಾರಕಾಸ್ತ್ರ ಮತ್ತು ಪಿಸ್ತೂಲ್ ಹೋಲುವ ಆಯುಧ ಹಿಡಿದುಕೊಂಡು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಸಾರ್ವಜನಿಕರಿಗೆ ಭಯ ಹುಟ್ಟಿಸುತ್ತಿದ್ದಾರೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರಿಂದ ಮಾರಕಾಸ್ತ್ರ, ಪಿಸ್ತೂಲ್ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಬಂಧಿತರಿಂದ ಪಿಸ್ತೂಲ್, ತಲವಾರ್, ಚಾಕು ಸೇರಿದಂತೆ ಇನ್ನಿತರ ವಸ್ತುಗಳ ಜಪ್ತಿ ಮಾಡಲಾಗಿದೆ. 

ವಿದ್ಯಾರ್ಥಿಗಳು, ಯುವಕರು, ನಾಗರಿಕರು ಯಾರೇ ಆಗಿರಲಿ ಮಾರಕಾಸ್ತ್ರಗಳನ್ನು ಹಿಡಿದು ರೀಲ್ಸ್‌, ವಿಡಿಯೋ ಮಾಡಿ , ಫೋಟೋಗಳನ್ನು ಕ್ಲಿಕ್ಕಿಸಿ ಸಮಾಜದಲ್ಲಿ ಭಯ ಹುಟ್ಟು ಹಾಕುವಂತಹ ಕೆಲಸ ಮಾಡಿದರೆ ಅದು ಕಾನೂನು ರೀತಿ ಅಪರಾಧ, ಇಂತಹವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ.

-ಡಾ. ಶರಣಪ್ಪ ಎಸ್‌ ಢಗೆ, ಪೊಲೀಸ್‌ ಆಯುಕ್ತರು, ಕಲಬುರಗಿ   

Share this article