ಕನ್ನಡಪ್ರಭ ವಾರ್ತೆ ಸಿದ್ದಾಪುರ
ಇತ್ತೀಚೆಗೆ ನೆಲ್ಯಹುದಿಕೇರಿಯ ಅತ್ತಿಮಂಗಲ ಸಮೀಪದ ಮೇರಿಲ್ಯಾಂಡ್ ಕಾಫಿ ತೋಟದಲ್ಲಿ ವಿದ್ಯುತ್ ತಗುಲಿ ಕಾಡಾನೆ ಸಾವನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ತೋಟದ ಕಾರ್ಮಿಕ ಜೋಸೆಫ್ ಎಂಬವರನ್ನು ಬಂಧಿಸಿ ಮಾರಣಾಂತಿಕ ಹಲ್ಲೆ ನಡೆಸಿ ಸುಳ್ಳು ಮೊಕದಮ್ಮೆ ಹಾಕಿರುವ ಅರಣ್ಯ ಇಲಾಖೆಯ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲೆ ಹಾಗೂ ಕಾರ್ಮಿಕ ಸಂಘಟನೆಗಳು ಸಿದ್ದಾಪುರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿತು.ಈ ಸಂದರ್ಭ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಆನೆ ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವನ್ನಪ್ಪಿದಕ್ಕೆ ಬಡ ಕಾರ್ಮಿಕರನ್ನು ಬಂಧಿಸಿ ದರ್ಪ ತೋರಿಸಿದ ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ಕಾಡಾನೆ ಸಾವನಪ್ಪಿರುವುದಕ್ಕೆ ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದ್ದು, ಅರಣ್ಯ ಅಧಿಕಾರಿಗಳ ಮೇಲೆ ಮೊಕದಮ್ಮೆ ದಾಖಲು ಮಾಡಬೇಕೇ ಹೊರತು ಕಾರ್ಮಿಕರ ಮೇಲೆ ಅಲ್ಲ. ರೈತರ ಮೇಲೆ ಮತ್ತು ಕಾರ್ಮಿಕರ ಮೇಲೆ ಅರಣ್ಯ ಇಲಾಖೆ ದಾಖಲಿಸಿರುವ ಸುಳ್ಳು ಮೊಕದಮ್ಮೆಗಳನ್ನು ವಾಪಸ್ ಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಮಡಿಕೇರಿ ಸ್ತಬ್ಧಗೊಳಿಸುವ ರೀತಿಯಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ವನ್ಯಜೀವಿಗಳ ಉಪಟಳದಿಂದ ನೆಮ್ಮದಿಯಲ್ಲಿ ಕೆಲಸ ಮಾಡಲಾಗುತ್ತಿಲ್ಲ. ಅರಣ್ಯ ಅಧಿಕಾರಿಗಳು ಹೀಗೆ ಕಿರುಕುಳ ನೀಡಿದರೆ ಮುಂದಿನ ದಿನಗಳಲ್ಲಿ ಅರಣ್ಯ ಅಧಿಕಾರಿಗಳನ್ನು ಕಟ್ಟಿ ಹಾಕಿ ಹೋರಾಟ ಮಾಡುತ್ತೇವೆ. ಮಾನವ ವನ್ಯಜೀವಿ ಸಂಘರ್ಷದ ಶಾಶ್ವತ ಪರಿಹಾರಕ್ಕಾಗಿ ಜೈಲಿಗೆ ಹೋಗಲು ತಯಾರಿದ್ದೆವೆ ಎಂದರು.ರೈತ ಸಂಘದ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್ ಬೋಪಯ್ಯ ಮಾತನಾಡಿ, ಕಾಡಾನೆಗಳು ಕಾಡಿನಲ್ಲಿರಬೇಕು ಹೊರತು ಕಾಫಿ ತೋಟಗಳಲ್ಲಿ ಅಲ್ಲ. ಕಾಡಾನೆ ಸಾವನ್ನಪ್ಪಿರುವುದಕ್ಕೆ ತೋಟದ ಕಾರ್ಮಿಕನನ್ನು ಅರಣ್ಯ ಇಲಾಖೆ ಬಂಧಿಸಿರುವುದು ಖಂಡನೀಯ. ನಮ್ಮ ಅನುಮತಿ ಇಲ್ಲದೆ ಅರಣ್ಯಧಿಕಾರಿಗಳು ನಮ್ಮ ತೋಟಕ್ಕೆ ಬರಬಾರದು ಎಂದರು.ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಕಾರ್ಮಿಕರು ಹಾಗೂ ರೈತರು ಜಿಲ್ಲೆಯಲ್ಲಿ ಕಾಡಾನೆ ಹಾವಳಿಯಿಂದ ಸಂಕಷ್ಟದಲ್ಲಿ ಜೀವನಸಾಗಿಸುತ್ತಿರುವ ಪರಿಸ್ಥಿತಿ ಒದಗಿದೆ. ರೈತರು ಬೆಳೆದ ಬೆಳೆಗಳು ಕಾಡಾನೆಗಳಿಂದ ನಾಶವಾಗಿ ಅಪಾರ ನಷ್ಟವನ್ನು ಅನುಭವಿಸುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದ ಅರಣ್ಯ ಇಲಾಖೆ ಕಾಡಾನೆ ಸಾವಿಗೆ ಕಾರ್ಮಿಕ ಜೋಸೆಫ್ ಕಾರಣ ಎಂದು ಆರೋಪಿಸಿ ಬಂಧಿಸಿ ಕಿರುಕುಳ ನೀಡಿರುವುದು ಖಂಡನೀಯ. ಅರಣ್ಯ ಇಲಾಖೆಯು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕಾರ್ಮಿಕರ ಮೇಲೆ ಹಾಗೂ ರೈತರ ಮೇಲೆ ತಮ್ಮ ಅಧಿಕಾರವನ್ನು ತೋರ್ಪಡಿಸುತ್ತಿದೆ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯು ತಲೆದಂಡ ತೆರಲೇಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಫಿ ತೋಟದಲ್ಲಿ ಕಾಡಾನೆ ಹಾವಳಿ ಇರುವುದನ್ನು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮಕ್ಕೆ ಮುಂದಾಗದೇ ಕಾಡಾನೆ ಸಾವಿಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಕಾರ್ಮಿಕ ಜೋಸೆಫ್ ರ ಮೇಲೆ ದಾಖಲು ಮಾಡಿರುವ ಪ್ರಕರಣವನ್ನು ಹಿಂಪಡೆಯದಿದ್ದರೆ ತೀವ್ರ ಹೋರಾಟಕ್ಕೆ ಮುಂದಾಗುವುದೆಂದು ಹೇಳಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಡಿ.ಸಿ. ಭೋಪಣ್ಣ, ಸಿ.ಬಿ. ಪೂಣಚ್ಚ, ಎಂ.ಬಿ. ಸಜೀವ, ಎಂ.ಸಿ. ಪೊನ್ನಪ್ಪ, ಹರ ಸೋಮಯ್ಯ, ವಿಕ್ರಂ ಬಿದ್ದಪ್ಪ, ಸುಜಯ್ ಬೋಪಯ್ಯ, ಸುಭಾಶ್ ಸುಬ್ಬಯ್ಯ, ಹಳಗದ್ದೆ ಮಾದಪ್ಪ, ಸಜೀವನ್, ಎನ್.ಡಿ. ಕುಟ್ಟಪ್ಪ, ಪುಚ್ಚಿಮಾಡ ಸುಭಾಷ್, ವಜ್ರ ಬೋಪಣ್ಣ, ನಾರಾಯಣ ಸೇರಿದಂತೆ ಕಾರ್ಮಿಕರು ಹಾಗೂ ಕಾಫಿ ಬೆಳೆಗಾರರು ಇದ್ದರು.