ದೆಹಲಿಯಲ್ಲಿ ಮುಖಂಡರ ಬಂಧನ: ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

KannadaprabhaNewsNetwork |  
Published : Jul 24, 2026, 01:30 AM IST
ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ. | Kannada Prabha

ಸಾರಾಂಶ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕರ ಬಂಧನ ಖಂಡಿಸಿ ಬುಧವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕರ ಬಂಧನ ಖಂಡಿಸಿ ಬುಧವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಇಂದಿರಾಗಾಂಧಿ ವೃತ್ತದಲ್ಲಿ ಜಮಾಯಿಸಿ ಕೇಂದ್ರ ಸರ್ಕಾರ ಹಾಗೂ ಪೊಲೀಸರ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಲಾಯಿತು. ನೀಟ್ ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಯಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಮಾತನಾಡಿ, ದೆಹಲಿಯಲ್ಲಿ ವಿದ್ಯಾರ್ಥಿಗಳ ಪರ ಹೋರಾಟ ನಡೆಸುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವುದು ಖಂಡನೀಯ. ಈ ನಡೆ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ. ನ್ಯಾಯಯುತವಾಗಿ ಹಕ್ಕುಗಳಿಗಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರ ಅಮಾನುಷವಾಗಿ ಲಾಠಿ ಪ್ರಹಾರ ನಡೆಸಿ ಅವರ ಧ್ವನಿಯನ್ನು ಹತ್ತಿಕ್ಕಲು ಯತ್ನಿಸಿದೆ. ಈಗ ವಿದ್ಯಾರ್ಥಿಗಳ ಪರವಾಗಿ ಬೆಂಬಲಕ್ಕೆ ನಿಂತ ಪ್ರತಿಪಕ್ಷ ನಾಯಕರನ್ನು ಪೊಲೀಸ್ ಬಲಪ್ರಯೋಗದ ಮೂಲಕ ಮೌನಗೊಳಿಸಲು ಹೊರಟಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ದೇಶವ್ಯಾಪಿ ಈ ಘಟನೆಯನ್ನು ಖಂಡಿಸಿ ಇಂದು ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿಭಟನೆ ಸಂದರ್ಭ ಕಾಂತ್ರಿಕಾರಿ ಬೆಳವಣಿಗೆ ನಡೆದರು ಕೂಡ ಕೇಂದ್ರ ಸರ್ಕಾರ ಅದನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ಈ ಹಿನ್ನೆಲೆ ರಾಜ್ಯ, ಜಿಲ್ಲಾ, ಹೋಬಳಿ ಮಟ್ಟದಲ್ಲಿ ಕಾಂತ್ರಿಕಾರಿಯಾಗಿ ಆಂದೋಲನ ಆಗಬೇಕಾಗಿದೆ ಎಂದರು.

ಯಾವುದೇ ಪರೀಕ್ಷೆಗೆ ತಯಾರಿ ಸುಲಭದ ಮಾತಲ್ಲ ಎಂದ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ದೇಶದ ವಿದ್ಯಾರ್ಥಿಗಳಿಗೆ ನಷ್ಟವಾಗಿದೆ. ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೆ, ಎಷ್ಟೋ ಮಕ್ಕಳ ಭವಿಷ್ಯ ಹಾಳಾಗಿದೆ. ಇಂದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಉತ್ತೀರ್ಣರಾಗಬೇಕಾದ ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ. ಅನುತೀರ್ಣರಾಗಬೇಕಿದ್ದ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ ಎಂದ ಅವರು, ಇಂದು ಶೈಕ್ಷಣಿಕ ನೀತಿ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು.

ಬಂಧನಕ್ಕೊಳಗಾಗಿರುವ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಎಲ್ಲ ವಿದ್ಯಾರ್ಥಿ ನಾಯಕರನ್ನು ತಕ್ಷಣವೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಈ ಘಟನೆಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು, ನಾವು ಕೂಡ ರಸ್ತೆ ತಡೆ ನಡೆಸಿ ಜೈಲು ಬರೋ ಚಳುವಳಿಗೆ ಸನ್ನದ್ಧರಾಗಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಡಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಮಡಿಕೇರಿ ತಾಲೂಕು ಅಧ್ಯಕ್ಷ ಮಂದ್ರಿರ ಮೋಹನ್ ದಾಸ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ವಕ್ತಾರ ತೆನ್ನೀರ ಮೈನಾ, ಕಾಂಗ್ರೆಸ್‌ನ ಪ್ರಮುಖರಾದ ಜಾನ್ಸನ್ ಪಿಂಟೋ, ಫ್ಯಾನ್ಸಿ ಮುತ್ತಣ್ಣ, ಮಿನಾಜ್ಹ್ ಪ್ರವೀಣ್, ಬೇಕಲ್ ರಮಾನಾಥ್, ಅಬ್ದುಲ್ ರಜ್ಹಾಕ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ದೇಶದ ಯುವಜನತೆಯ ಭವಿಷ್ಯದ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಇಂತಹ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದ ಪತ್ರಿಭಟನಾ ನಿರತರು ಇಂದಿರಗಾಂಧಿ ವೃತ್ತದಲ್ಲಿ ರಸ್ತೆತಡೆ ನಡೆಸಲು ಮುಂದಾದರು. ಈ ಸಂದರ್ಭ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸಜ್ಜಾಗಿದ್ದ ಪೊಲೀಸ್ ಇಲಾಖೆ ಪ್ರತಿಭಟನಾ ನಿರತರನ್ನು ವಶಪಡಿಸಿಕೊಂಡರು. ಎರಡು ಮಿನಿ ಪೊಲೀಸ್ ವಾಹನ ಮತ್ತು ೨ ಪೊಲೀಸ್ ಜೀಪ್‌ಗಳನ್ನು ಬಳಸಿ ಪ್ರತಿಭಟನಾ ನಿರತರನ್ನು ನಗರದ ಮೈತ್ರಿಹಾಲ್‌ಗೆ ಕರೆದೊಯ್ದು ಬಿಡುಗಡೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾರಾಯಣಗುರು ನಿಗಮಕ್ಕೆ 500 ಕೋಟಿ ರು. ನೀಡದೆ ಸರ್ಕಾರ ವಂಚಿಸಿದೆ: ವಿಠಲ ಪೂಜಾರಿ
ಮಹಾರಾಷ್ಟ್ರ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರಿ