ಮನೆ ಮೇಲ್ಛಾವಣಿ ಮೇಲೆ ಗಾಂಜಾ ಗಿಡ ಬೆಳೆದಿದ್ದ ಮಾಲೀಕನ ಬಂಧನ

KannadaprabhaNewsNetwork | Published : Feb 15, 2025 12:33 AM

ಸಾರಾಂಶ

ಗ್ರಾಮದಲ್ಲಿ ತನ್ನ ಮನೆ ಮೇಲೆ ಗಾಂಜಾ ಬೆಳೆದು ನಂತರ ತನ್ನ ಅಂಗಡಿಯಲ್ಲಿ ಇಟ್ಟು ಮಾರಾಟ ಮಾಡುತ್ತಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಹಳೇಹಳ್ಳಿಯ ಮನೆಯೊಂದರ ಮೇಲೆ ಶುಕ್ರವಾರ ದಾಳಿ ನಡೆಸಿದ ಪೊಲೀಸರು ಮೇಲ್ಛಾವಣಿ ಮೇಲೆ ಬೆಳೆದಿದ್ದ ಗಾಂಜಾ ಗಿಡವನ್ನು ವಶಪಡಿಸಿಕೊಂಡು ಮಾಲೀಕನನ್ನು ಬಂಧಿಸಿದ್ದಾರೆ.

ಹಳೇಹಳ್ಳಿಯ ಲೇಟ್ ನಿಂಗೇಗೌಡನ ಪುತ್ರ ಕರಿಯಪ್ಪ ಬಂಧಿತ ಆರೋಪಿ. ಈತ ಮನೆ ಮೇಲ್ಛಾವಣಿ ಮೇಲೆ ಬೆಳೆದಿದ್ದ ಕಾಂಡ ಬೇರು ಸಹಿತ 3 ಕೆಜಿ 600 ಗ್ರಾಂ ಹಸಿ ಗಾಂಜಾವನ್ನು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಮಾರ್ಗದರ್ಶನದಲ್ಲಿ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ, ಮದ್ದೂರು ಗ್ರಾಮಾಂತರ ವಿಭಾಗದ ಸಿಪಿಐ ವೆಂಕಟೇಗೌಡ, ಕೊಪ್ಪ ಠಾಣೆಯ ಪಿಎಸ್ಐ ಭೀಮಪ್ಪ ಬಾಣಸಿ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಆಧಾರದ ಮೇಲೆ ಬೆಳಗ್ಗೆ 10.30ರ ಸುಮಾರಿಗೆ ಆರೋಪಿ ಕರಿಯಪ್ಪ ಮನೆ ಮೇಲೆ ದಿಢೀರ್ ದಾಳಿ ನಡೆಸಿ, ಮನೆ ಮೇಲ್ಛಾವಣಿ ಮೇಲೆ ಕುಂಡಗಳಲ್ಲಿ ಬೆಳೆದಿದ್ದ ಬೇರು, ಕಾಂಡ ಸಹಿತ 3 ಕೆಜಿ 600 ಗ್ರಾಂ ಹಸಿ ಗಾಂಜಾ ಸೊಪ್ಪನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತನ ವಿರುದ್ಧ ಮಾದಕ ದ್ರವ್ಯಗಳ ಮತ್ತು ಮನೋವಿಕೃತಿ ವಸ್ತುಗಳ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮೈಸೂರಿನಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ಕುಟುಂಬ ಸಹಿತ ವಾಸವಾಗಿದ್ದ ಕರಿಯಪ್ಪ ಆಗಾಗ ಹಳೇಹಳ್ಳಿಯ ತಮ್ಮ ಮನೆಗೆ ಬಂದು ಹೋಗುತ್ತಿದ್ದನು.

ಗ್ರಾಮದಲ್ಲಿ ತನ್ನ ಮನೆ ಮೇಲೆ ಗಾಂಜಾ ಬೆಳೆದು ನಂತರ ತನ್ನ ಅಂಗಡಿಯಲ್ಲಿ ಇಟ್ಟು ಮಾರಾಟ ಮಾಡುತ್ತಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.

ಬಂಧಿತನ ವಿಚಾರಣೆ ನಂತರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಒಂದನೇ ಅಪರ ಸಿವಿಲ್ ನ್ಯಾಯಾಧೀಶರಾದ ಎಸ್. ಸಿ.ನಳಿನಾ ಅವರ ಮುಂದೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share this article