ಉಗ್ರರ ಬೆಂಬಲಿಸಿ ವಿಡಿಯೋ ಹರಿಯಬಿಟ್ಟವನ ಬಂಧನ

KannadaprabhaNewsNetwork | Published : Oct 15, 2023 12:45 AM

ಸಾರಾಂಶ

ಹಮಾಸ್ ಉಗ್ರರನ್ನು ‘ದೇಶಪ್ರೇಮಿಗಳು’ ಎಂದು ಕರೆದು ವಿಡಿಯೋ ಮಾಡಿ ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾ ಆರೋಪಿಯನ್ನು ಬಂಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು ಇಸ್ರೇಲ್ ಮತ್ತು ಪ್ಯಾಲೇಸ್ತೇನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ಮಧ್ಯೆ ಮಂಗಳೂರಿನ ವ್ಯಕ್ತಿಯೊಬ್ಬ ಹಮಾಸ್ ಉಗ್ರರನ್ನು ‘ದೇಶಪ್ರೇಮಿಗಳು’ ಎಂದು ಕರೆದು ವಿಡಿಯೋ ಮಾಡಿ ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾನೆ. ಈತನ ವಿರುದ್ಧ ಹಿಂದು ಸಂಘಟನೆಗಳು ಬಂದರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಸಾಮಾಜಿಕ ತಾಣಗಳಲ್ಲಿ ಮಂಗಳೂರಿನ ಝಾಕೀರ್ ಎಂಬಾತ ಹರಿಯಬಿಟ್ಟ ವಿಡಿಯೋ ಇದಾಗಿದ್ದು, ಈತನನ್ನು ಬಂದರು ಪೊಲೀಸರು ಶನಿವಾರ ಬಂಧಿಸಿದ್ದಾರೆ. ತನ್ನ ವೇಷಭೂಣಗಳಿಂದ ತಾಲಿಬಾನ್‌ ಝಾಕೀರ್‌ ಎಂದೇ ಕುಖ್ಯಾತಿ ಪಡೆದಿದ್ದ. ಈತನ ವಿರುದ್ಧ ಐಪಿಸಿ ಸೆಕ್ಷನ್‌ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈತ ಹಮಾಸ್‌ ಉಗ್ರರ ಪರ ವಿಡಿಯೋ ಹರಿಯಬಿಟ್ಟು ಕೋಮು ಪ್ರಚೋದನೆ ನಡೆಸಿದ್ದಾನೆ. ಆತ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಾಧ್ಯತೆ ಇದ್ದು, ಈತನಿಗೆ ಉಗ್ರರ ನಂಟಿನ ಸಾಧ್ಯತೆ ಇದ್ದು, ಈತನನ್ನು ಬಂಧಿಸಿ ತನಿಖೆ ನಡೆಸುವಂತೆ ವಿಶ್ವಹಿಂದು ಪರಿಷತ್‌ ಮುಖಂಡ ಪ್ರದೀಪ್‌ ಕುಮಾರ್‌ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ವಿಡಿಯೋದಲ್ಲಿ ಏನಿದೆ?: ಮಂಗಳೂರಿನ ಬಂದರು ರಸ್ತೆಯ ಝಾಕೀರ್ ಎಂಬಾತನ ವಿಡಿಯೋ ಇದಾಗಿದ್ದು, ‘ದೇಶಪ್ರೇಮಿ ಹಮಾಸ್ ಯೋಧರಿಗೆ ವಿಜಯವಾಗಲಿ’ ಎಂದು ಹೇಳಿದ್ದಾನೆ. ಮಸೀದಿಯ ಶುಕ್ರವಾರದ ನಮಾಜ್‌ನಲ್ಲಿ ಪ್ರಾರ್ಥಿಸಿ ಎಂದಿರೋ ಝಾಕೀರ್, ತಾನು ವಿಶ್ವ ಖಬ್ರುಸ್ತಾನ್ ಪ್ರೇಮಿ ಸಂಘದ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ಪ್ಯಾಲೆಸ್ತೀನ್, ಗಾಜಾ ಹಾಗೂ ದೇಶಪ್ರೇಮಿ ಹಮಾಸ್ ಯೋಧರಿಗೆ ವಿಜಯವಾಗಲು ಪ್ರಾರ್ಥಿಸಿ ಎಂದು ಮನವಿ ಮಾಡಿರುವ ಈತ, ಶುಕ್ರವಾರದ ನಮಾಜ್‌ನಲ್ಲಿ ಪ್ರತ್ಯೇಕವಾಗಿ ಪ್ರಾರ್ಥಿಸಿ ಎಂದು ವಿಶ್ವ ಖಬ್ರುಸ್ತಾನ್ ಪ್ರೇಮಿ ಸಂಘದ ಸದಸ್ಯರಿಗೆ ಕರೆ ಕೊಟ್ಟಿದ್ದಾನೆ. ಅಧಿಕಾರಿಗಳೇ, ದೇಶಪ್ರೇಮಿಗಳು ಎಚ್ಚೆತ್ತುಗೊಂಡು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿ ಕೊಡಬೇಡಿ. ಕೂಡಲೇ ಈತನನ್ನು ಬಂಧಿಸಲು ಕ್ರಮ ಕೈಗೊಳ್ಳುವಂತೆ ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್‌ ಎಚ್ಚರಿಕೆ ನೀಡಿದ್ದರು.

Share this article