ಶಿವಾನಂದ ಗೊಂಬಿ
ಕಸ ವಿಲೇವಾರಿ ಸುಗಮವಾಗಲೆಂಬ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಳವಡಿಸಿದ್ದ "ಆರ್‌ಎಫ್‌ಐಡಿ ಟ್ಯಾಗ್ " ಇದೀಗ ನಿರುಪಯುಕ್ತವಾಗಿವೆ. ಸರಿಯಾಗಿ ರೀಡ್ ಆಗುತ್ತಿಲ್ಲ. ಇದಕ್ಕಾಗಿ ಖರ್ಚು ಮಾಡಿರುವ ₹43 ಕೋಟಿ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ!
ಆರ್‌ಎಫ್‌ಐಡಿ ಎಂದರೆ "ರೆಡಿಯೋ ಫ್ರಿಕ್ವೆನ್ಸಿ ಐಡಿಟೆಂಟಿಫಿಕೇಶನ್ ಟ್ಯಾಗ್ ". ಇದನ್ನು ಪ್ರತಿ ಮನೆಯ ಕಾಂಪೌಂಡ್, ಗೇಟ್ ಸೇರಿದಂತೆ ಆ ಮನೆಯವರಿಂದ ಕಸ ಶೇಖರಿಸುವ ಜಾಗೆಯಲ್ಲಿ ಅಳವಡಿಸಲಾಗಿದೆ. ಕಸ ಸಂಗ್ರಹಕ್ಕೆ ಹೋದ ಪೌರಕಾರ್ಮಿಕರ ಬಳಿ ಅದರ ರೀಡರ್ ಇರುತ್ತದೆ. ರೀಡರ್‌ನ್ನು ಆ ಟ್ಯಾಗ್ ಬಳಿ ಹಿಡಿದಾಗ ರೀಡ್ ಆಗುತ್ತದೆ. ಅದರ ಕಂಟ್ರೋಲ್ ರೂಂನಲ್ಲಿ ಆ ಮನೆಯಿಂದ ಕಸ ಸಂಗ್ರಹಿಸಲಾಗಿದೆ ಎಂಬುದು ದಾಖಲಾಗುತ್ತದೆ.ಯಾರು ತಮ್ಮ ಮನೆಗೆ ಕಸ ಸಂಗ್ರಹಕ್ಕೆ ಪೌರಕಾರ್ಮಿಕರು ಬಂದೇ ಇಲ್ಲ ಅಂತಾನೂ ಹೇಳಲು ಬರಲ್ಲ. ಕಸ ತೆಗೆದುಕೊಳ್ಳೋಕೆ ಹೋಗಿದ್ದೆ ಅವರೇ ಕೊಟ್ಟಿಲ್ಲ ಎಂದು ಪೌರಕಾರ್ಮಿಕರು ಸುಳ್ಳು ಹೇಳಲು ಆಸ್ಪದ ಇರಲ್ಲ ಎಂಬ ಕಾರಣಕ್ಕೆ ನಗರದಲ್ಲಿ ಈ ಟ್ಯಾಗ್ ಅಳವಡಿಸಲಾಗಿತ್ತು.
ರೀಡರ್ ಸರಿಯಿಲ್ಲ:
ಕಸ ಸಂಗ್ರಹ ಮಾಡುವುದು ಪಾಲಿಕೆಯ ಪೌರಕಾರ್ಮಿಕರು, ಇವುಗಳನ್ನು ಅಳವಡಿಸಿ 4 ವರ್ಷವಾದರೂ ಈಗಲೂ ಮಾನಿಟಿರಿಂಗ್ ಮಾಡುವುದು ಸ್ಮಾರ್ಟ್‌ಸಿಟಿಯಲ್ಲಿ. ಹೀಗಾಗಿ, ಅವರು ಹೇಳಿದ್ದೇ ಲೆಕ್ಕ. ಇವರು ಕೇಳಿದ್ದೆ ಲೆಕ್ಕ. ಸ್ಮಾರ್ಟ್‌ಸಿಟಿ ಅಧಿಕಾರಿ ವರ್ಗ ಎಲ್ಲವೂ ಸರಿಯಿದೆ ಎಂದು ವರದಿ ಕೊಡುತ್ತದೆ. ಪಾಲಿಕೆಯವರು ಆಯ್ತು ಎಂದುಕೊಂಡು ಒಪ್ಪಿಕೊಳ್ಳುತ್ತಾರೆ. ಆದರೆ, ಆರ್‌ಎಫ್‌ಐಡಿ ಟ್ಯಾಗ್ ಅಳವಡಿಕೆಯಿಂದ ನಯಾ ಪೈಸೆಯಷ್ಟು ಉಪಯೋಗವಾಗಿಲ್ಲ. ಸ್ಮಾರ್ಟ್‌ಸಿಟಿ ದುಡ್ಡು ಖರ್ಚಾಗಿದೆ ಅಷ್ಟೇ ಎಂದು ಪಾಲಿಕೆ ಸದಸ್ಯರೇ ಆರೋಪಿಸುತ್ತಾರೆ.
ಈಗಲೂ ಕಾಲಮಿಂಚಿಲ್ಲ. ಆರ್‌ಎಫ್‌ಐಡಿಯಲ್ಲಿ ದೋಷಗಳನ್ನು ಸರಿಪಡಿಸಿ ಸರಿಯಾಗಿ ನಿರ್ವಹಣೆ ಮಾಡಬೇಕು. ರೀಡರ್, ಟ್ಯಾಗ್, ಬ್ಯಾಟರಿ ಸೇರಿದಂತೆ ಸಂಬಂಧಪಟ್ಟ ಪರಿಕರಗಳಲ್ಲಿನ ದೋಷಗಳನ್ನು ಸರಿಪಡಿಸಬೇಕು ಎಂದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.
ಈ ಕುರಿತು ಪಾಲಿಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಆರ್‌ಎಫ್‌ಐಡಿಯಿಂದ ನಯಾಪೈಸೆಯಷ್ಟು ಉಪಯೋಗವಾಗಿಲ್ಲ. ಯಾವ ಟ್ಯಾಗ್ ಸರಿಯಾಗಿ ರೀಡ್ ಆಗುವುದೇ ಇಲ್ಲ. ಪೌರಕಾರ್ಮಿಕರಾದರೂ ಏನು ಮಾಡುತ್ತಾರೆ. ಹಾಗೆ ಮಾಡಿದಂಗೆ ಮಾಡಿ ಮುಂದೆ ಹೋಗುತ್ತಾರಷ್ಟೇ. ಇದಕ್ಕಾಗಿ ಹಾಕಿದ್ದ 43 ಕೋಟಿ ವ್ಯರ್ಥವಾದಂತಾಗಿದೆ ಎಂದಿದ್ದಾರೆ.