ಕನ್ನಡಪ್ರಭ ವಾರ್ತೆ ಬಳ್ಳಾರಿಕಾಲೇಜು ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಆಟೋದಲ್ಲಿ ಹೊತ್ತೊಯ್ದು ಅತ್ಯಾಚಾರ ಎಸಗಿದ ಬೀಭತ್ಸ ಪ್ರಕರಣ ನಗರದಲ್ಲಿ ನಡೆದಿದೆ. ನಗರದ ಖಾಸಗಿ ಕಾಲೇಜೊಂದರಲ್ಲಿ ಬಿಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದ ಯುವತಿಗೆ, ನಿಮ್ಮ ಅಣ್ಣ ಬಂದಿದ್ದಾನೆ ಎಂದು ಸುಳ್ಳು ಹೇಳಿ ಹೊರಗಡೆ ಕರೆಸಿಕೊಂಡ ನಾಲ್ವರು ದುಷ್ಕರ್ಮಿಗಳು ಆಕೆಯನ್ನು ಆಟೋದಲ್ಲಿ ಹೊತ್ತೊಯ್ದು ಗಂಗಾವತಿ ತಾಲೂಕು ಸಣಾಪುರ ಬಳಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿರುವ ಕುರಿತು ಸಂತ್ರಸ್ತೆ ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣದ ಮುಖ್ಯ ಆರೋಪಿ ನವೀನ್ ಎಂಬ ಯುವಕನನ್ನು ಬಂಧಿಸಲಾಗಿದ್ದು, ಆರೋಪಿಗಳಾದ ಸಕೀಬ್, ತನ್ನು ಹಾಗೂ ಮತ್ತೋರ್ವನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ವಿವರ:ನಗರದ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ಬಿಕಾಂ ಓದುತ್ತಿರುವ ಯುವತಿ ಅ. 11ರಂದು ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದ ವೇಳೆ ಸಂಜೆ 4.30ರ ಸುಮಾರಿಗೆ ಕಾಲೇಜು ಬಳಿ ಬಂದಿರುವ ನಾಲ್ವರು ದುಷ್ಕರ್ಮಿಗಳು ಕಾಲೇಜಿನ ಆಯಾ ಮೂಲಕ, ನಿಮ್ಮ ಅಣ್ಣ ಬಂದಿದ್ದಾರೆ ಎಂದು ಹೊರಗಡೆ ಕರೆಸಿಕೊಂಡಿದ್ದಾರೆ. ಹೊರಗಡೆ ಬಂದು ನೋಡಿದಾಗ ಯಾರೂ ಕಾಣದಿದ್ದರಿಂದ ಯುವತಿ ಭೀತಿಗೊಂಡು ಮತ್ತೆ ಕಾಲೇಜು ಒಳಗೆ ಹೋಗಲು ಮುಂದಾದಾಗ ಯುವತಿಯ ಪರಿಚಿತನಿರುವ ನವೀನ್ ಎಂಬಾತ ಯುವತಿಯನ್ನು ತಡೆದು ನಿಲ್ಲಿಸಿದ್ದಾನೆ. ಅಲ್ಲದೆ ನಿಲ್ಲಿಸಿಕೊಂಡಿದ್ದ ಆಟೋದ ಬಳಿ ಬಲವಂತವಾಗಿ ಎಳೆದುಕೊಂಡು ಹೋಗಿ ಕೂಡಿಸಿಕೊಂಡಿದ್ದಾನೆ. ಆಟೋದಲ್ಲಿ ನವೀನ್‌ನ ಇತರ ಮೂವರು ಗೆಳೆಯರು ಸೇರಿ ಹೊಸಪೇಟೆ ಕಡೆ ತೆರಳಿದ್ದಾರೆ. ಇದೇ ವೇಳೆ ಯುವತಿ ಕೂಗಿಕೊಂಡರೂ ಯಾರೂ ಸಹಾಯಕ್ಕೆ ಬಂದಿಲ್ಲ. ಆಟೋದಲ್ಲಿದ್ದ ನಾಲ್ವರು ದುಷ್ಕರ್ಮಿಗಳು ಯುವತಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿದ್ದು, ಮಧ್ಯರಾತ್ರಿ 12.30ರ ಸುಮಾರಿಗೆ ಗಂಗಾವತಿ ತಾಲೂಕಿನ ಸಣಾಪುರ ಬಳಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಅತ್ಯಾಚಾರ ನಡೆಸಿದ್ದಾರೆ. ಅಪಹರಣದ ವಿಷಯ ಗೊತ್ತಾಗುತ್ತಿದ್ದಂತೆಯೇ ಯುವತಿಯ ಅಣ್ಣ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಮುಖ ಆರೋಪಿ ನವೀನ್ ಸಿಕ್ಕಿಬಿದ್ದಿದ್ದಾನೆ. ಉಳಿದ ಮೂವರು ಅಲ್ಲಿಂದ ಪರಾರಿಯಾಗಿದ್ದಾರೆ. ತನ್ನನ್ನು ಅಪಹರಿಸಿ ಅತ್ಯಾಚಾರ ಎಸಗಿದ ನವೀನ್ ಮತ್ತು ಇತರ ಮೂವರು ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು. ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಯುವತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿ, ಯುವತಿಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳೆಲ್ಲರೂ ಬಳ್ಳಾರಿಯವರಾಗಿದ್ದು, ಉಳಿದವರನ್ನು ಶೀಘ್ರವೇ ಬಂಧಿಸಲಾಗುವುದು ಎಂದರು.