ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಸ್ಮಾರ್ಟ್ಸಿಟಿ ಕಾಮಗಾರಿಗಳಲ್ಲಿ ದೋಷಗಳ ಬಗ್ಗೆ ಅಸಮಾಧಾನ, ಆಕ್ಷೇಪದ ನಡುವೆಯೇ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯು ಹಸ್ತಾಂತರ ಮಾಡಿಕೊಳ್ಳಲು ಸದ್ದಿಲ್ಲದೇ ತಯಾರಿ ನಡೆಸಿದೆ.
ಮುಂದಿನ ಸಾಮಾನ್ಯಸಭೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗಳ ಕುರಿತು ಚರ್ಚೆ ನಡೆಸಿ ಪಾಲಿಕೆಯ ಅನುಮತಿ ಪಡೆಯಲು ಮುಂದಾಗಿದೆ. ಆದರೆ ಇದಕ್ಕೆ ಆಡಳಿತ ಪಕ್ಷದ ಸದಸ್ಯರೇ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಪಾಲಿಕೆಗೆ ನುಂಗಲಾರದ ತುತ್ತಾಗಿ ಪರಿಣಿಮಿಸಿದೆ.ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 68 ಕಾಮಗಾರಿಗಳನ್ನು ಸ್ಮಾರ್ಟ್‌ಸಿಟಿ ಯೋಜನೆ ಕೈಗೆತ್ತಿಕೊಂಡಿದೆ. ಅದರಲ್ಲಿ 63 ಕಾಮಗಾರಿಗಳು ಈಗಾಗಲೇ ಪೂರ್ಣವಾಗಿದ್ದು, ಅವುಗಳನ್ನು ಹಸ್ತಾಂತರಿಸಿಕೊಳ್ಳುವಂತೆ ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರಂತೆ. ಅದರಂತೆ ಸರ್ಕಾರ ಕೂಡ ಕಾಮಗಾರಿ ಪರಿಶೀಲಿಸಿ ಹಸ್ತಾಂತರಿಸಿಕೊಳ್ಳಲಿ ಎಂದು ಸೂಚನೆ ನೀಡಿದೆ. ಅದಕ್ಕೆ ತಕ್ಕಂತೆ ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಹಸ್ತಾಂತರಿಸಿಕೊಳ್ಳಬಾರದು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಪೂರ್ವಾಪರ ವಿಚಾರ ಮಾಡಿಯೇ ಹಸ್ತಾಂತರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂಬುದು ಆಡಳಿತ ಹಾಗೂ ವಿಪಕ್ಷ ಸದಸ್ಯರ ಆಗ್ರಹ.
ಲೋಕಾಯುಕ್ತಕ್ಕೆ ದೂರು:ಈ ನಡುವೆ ಹಿಂದಿನ ಮೇಯರ್ ಈರೇಶ ಅಂಚಟಗೇರಿ, ತಮ್ಮ ಆಡಳಿತಾವಧಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿನ ಕಾಮಗಾರಿಗಳು ಸರಿಯಾಗಿ ಆಗಿಯೇ ಇಲ್ಲ. ಯಾವ್ಯಾವ ಕಾಮಗಾರಿಗಳ ನಿರ್ವಹಣೆ ಯಾವ ರೀತಿ ಮಾಡಬೇಕು. ಅದಕ್ಕೆ ಪಾಲಿಕೆಗೆ ಎಷ್ಟು ವೆಚ್ಚವಾಗುತ್ತದೆ. ಈಗ ಪೂರ್ಣಗೊಳಿಸಿರುವ ಯೋಜನೆಗಳಿಂದ ಪಾಲಿಕೆಗೇ ಆದಾಯ ಬರುತ್ತದೆಯೋ ಹೇಗೆ ಎಂದು ಈ ಹಿಂದೆಯೇ ಪ್ರಶ್ನಿಸಿದ್ದರು. ಆದರೆ, ಸ್ಮಾರ್ಟ್‌ಸಿಟಿಯಿಂದ ಯಾವುದೇ ಉತ್ತರ ದೊರೆತಿರಲಿಲ್ಲ.
ಜತೆಗೆ ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯವಹಾರವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರಧಾನಮಂತ್ರಿಗಳ ಕಚೇರಿ ಹಾಗೂ ಲೋಕಾಯುಕ್ತಕ್ಕೆ ದೂರು ಕೂಡ ಕೊಟ್ಟಿದ್ದರು. ಪ್ರಧಾನಮಂತ್ರಿಗಳ ಕಚೇರಿಯಿಂದ ಸ್ಮಾರ್ಟ್‌ಸಿಟಿ ಯೋಜನೆಗೆ ಸ್ಪಷ್ಟನೆ ಕೂಡ ಕೇಳಲಾಗಿದೆಯಂತೆ. ಆದರೂ ಸಮರ್ಪಕ ಉತ್ತರ ಮಾತ್ರ ದೊರೆತಿಲ್ಲ. ಲೋಕಾಯುಕ್ತ ತನಿಖೆ ಕೂಡ ನಡೆಯುತ್ತಿದೆ.ಇವುಗಳ ಮಧ್ಯೆಯೇ ಇದೀಗ 63 ಕಾಮಗಾರಿಗಳನ್ನು ಹಸ್ತಾಂತರಿಸಿಕೊಳ್ಳಲು ತಯಾರಿ ನಡೆದಿದೆ. ಇದಕ್ಕೆ ಆಡಳಿತ ಪಕ್ಷದ ಅಂಚಟಗೇರಿ ಸೇರಿದಂತೆ ಕೆಲವರು ಹಾಗೂ ವಿಪಕ್ಷದ ಕೆಲ ಸದಸ್ಯರು ವಿರೋಧಿಸಿದ್ದಾರೆ. ಆದರೂ ಮೇಯರ್ ಸೇರಿದಂತೆ ಕೆಲ ಹಿರಿಯ ಸದಸ್ಯರು, ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಹಸ್ತಾಂತರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದನ್ನು ಇನ್ನೊಮ್ಮೆ ಥರ್ಡ್ ಪಾರ್ಟಿಯಿಂದ ಪರಿಶೀಲನೆ ನಡೆಸಿ ದೋಷಗಳನ್ನೆಲ್ಲ ಸರಿಪಡಿಸಿದ ನಂತರವೇ ಹಸ್ತಾಂತರಿಸಿಕೊಳ್ಳುವ ಪ್ರಕ್ರಿಯೆ ನಡೆಸಬೇಕು ಎಂಬ ಬೇಡಿಕೆ ಸದಸ್ಯರದ್ದು.
ಜಂಟಿ ಸರ್ವೆ:ಈ ನಡುವೆ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಎಂಜಿನಿಯರ್‌ಗಳ ತಂಡವೂ ಈಗಾಗಲೇ ಜಂಟಿ ಸಮೀಕ್ಷೆ ನಡೆಸಿದ್ದು, ಪಾಲಿಕೆ ಎಂಜಿನಯರ್ ತಂಡವೂ ಕೆಲಸಗಳೆಲ್ಲ ತೃಪ್ತಿಕರವಾಗಿವೆ ಎಂದು ಹೇಳಿಯಾಗಿದೆ. ಈ ರೀತಿ ಅವರು ವರದಿ ಕೊಟ್ಟ ಮೇಲೆ ಒಂದು ತಿಂಗಳ ಕಳೆದರೂ ಹಸ್ತಾಂತರ ಮಾಡಿಕೊಳ್ಳಲಿಲ್ಲ ಎಂದರೆ ಡಿಮ್ಡ್ ಹಸ್ತಾಂತರ ಆದಂತಾಗುತ್ತದೆ. ಅಂದರೆ ಪಾಲಿಕೆ ಹಸ್ತಾಂತರ ಮಾಡಿಕೊಂಡಿದೆ ಎಂಬ ಅರ್ಥ ಬರುತ್ತದೆ ಎಂಬುದು ಸ್ಮಾರ್ಟ್ ಸಿಟಿ ಅಧಿಕಾರಿಗಳ ವಾದ.
ಒಟ್ಟಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗಳ ಕಾಮಗಾರಿ ಹಸ್ತಾಂತರ ವಿಷಯದಲ್ಲಿ ಪಾಲಿಕೆ, ಸ್ಮಾರ್ಟ್‌ಸಿಟಿ, ಪಾಲಿಕೆಯ ಸದಸ್ಯರ ನಡುವೆ ಹಗ್ಗ ಜಗ್ಗಾಟ ನಡೆದಿರುವುದಂತೂ ಸತ್ಯ. ಪಾಲಿಕೆ ಏನು ಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮೇಯರ್ ಈರೇಶ ಅಂಚಟಗೇರಿ, ನಾನು ಮೇಯರ್ ಆಗಿದ್ದಾಗ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ದೋಷಗಳನ್ನು ಸರಿಪಡಿಸದೇ ಹಸ್ತಾಂತರಿಸಿಕೊಳ್ಳುವುದು ಸರಿಯಲ್ಲ. ಮೊದಲು ಅದು ಕ್ಲಿಯರ್ ಆಗಬೇಕು. ಯಾವ ಕಾಮಗಾರಿಯೂ ಸರಿಯಾಗಿಲ್ಲ. ಎಲ್ಲದರಲ್ಲೂ ಅವ್ಯವಹಾರ ನಡೆದಿದೆ ಎಂದಿದ್ದಾರೆ.
ಪಾಲಿಕೆ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಪೂರ್ಣಗೊಂಡ ಕಾಮಗಾರಿಗಳನ್ನು ಪರಿಶೀಲಿಸುತ್ತೇವೆ. ಸಾಮಾನ್ಯಸಭೆಯ ಮುಂದೆ ತರುತ್ತೇವೆ. ಸಭೆಯಲ್ಲಿ ಏನು ನಿರ್ಧಾರವಾಗುತ್ತದೆ. ಅದರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.ಮೇಯರ್ ವೀಣಾ ಬರದ್ವಾಡ ಮಾತನಾಡಿ, ಈಗಾಗಲೇ ಸರ್ಕಾರದ ಮಟ್ಟದಲ್ಲಿ ಹಸ್ತಾಂತರಗೊಂಡಂತಾಗಿದೆ. ಈಗ ಸಾಮಾನ್ಯಸಭೆಯಲ್ಲಿ ಚರ್ಚಿಸಿ ಪಾಲಿಕೆ ಹಸ್ತಾಂತರಿಸಿಕೊಳ್ಳುವುದಷ್ಟೇ ಬಾಕಿಯುಳಿದಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆಗೆ ಬರಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ರುದ್ರೇಶ ಗಾಳಿ ಪ್ರತಿಕ್ರಿಯಿಸಿ, ಸ್ಮಾರ್ಟ್‌ಸಿಟಿ ಯೋಜನೆಗಳನ್ನು ಹಸ್ತಾಂತರಿಸಿಕೊಳ್ಳುವಂತೆ ಪಾಲಿಕೆಗೆ ಪತ್ರ ಬರೆಯಲಾಗಿದೆ. ಸಾಮಾನ್ಯಸಭೆಯಲ್ಲಿ ಚರ್ಚಿಸಿ ಹಸ್ತಾಂತರಿಸಿಕೊಳ್ಳಲಾಗುವುದು ಎಂದು ಅದು ತಿಳಿಸಿದೆ. ಜಂಟಿ ಸಮೀಕ್ಷೆ ಕೂಡ ಮುಗಿದಿದೆ. ಹಸ್ತಾಂತರಿಸಿಕೊಳ್ಳುವುದೊಂದೆ ಬಾಕಿಯುಳಿದಿದೆ ಎಂದು ತಿಳಿಸಿದ್ದಾರೆ.