ಕೊಪ್ಪಳ: ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಕೊಲೆ ಮಾಡುವ ಯತ್ನ ನಡೆದಿದೆ. ಮೊದಲು ಅವರನ್ನು ಬಂಧಿಸಬೇಕು. ಅದನ್ನು ಬಿಟ್ಟು ಸಿ.ಟಿ. ರವಿಯನ್ನು ಬಂಧಿಸಿದ್ದು ಅಲ್ಲದೆ, ಉಗ್ರಗಾಮಿಯಂತೆ ನಡೆಸಿಕೊಂಡಿರುವುದು ಯಾವ ನ್ಯಾಯ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಕೆಟ್ಟ ಪದ ಬಳಸಿಲ್ಲ ಎಂದಿದ್ದಾರೆ. ಬಳಿಸಿದ್ದರೆ ಕಾನೂನು ರೀತಿ ಕ್ರಮವಾಗಲಿ. ನಿಯಮಾನುಸಾರ ಕ್ರಮವಾಗಲಿ. ಆದರೆ, ಸುವರ್ಣ ಸೌಧದಲ್ಲಿಯೇ ಏಕಾಏಕಿ ಹಲ್ಲೆ ಮಾಡುವ ಯತ್ನವಾದರೂ ಹೇಗೆ ನಡೆಯಿತು. ಇದೆಲ್ಲವೂ ಪೂರ್ವಯೋಜಿತ ಕೃತ್ಯ ಎನ್ನುವ ಅನುಮಾನ ಮೂಡುತ್ತದೆ. ಸಿ.ಟಿ. ರವಿ ಅವರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೊಲೆಗಡುಕ ಎನ್ನುವುದು ಎಷ್ಟು ಸರಿ. ಸಿ.ಟಿ. ರವಿ ಅವರು ಯಾವುದಾದರೂ ಕೊಲೆ ಮಾಡಿದ್ದಾರೆಯೇ ಎಂದು ಕಿಡಿಕಾರಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ವಿರುದ್ಧವೂ ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ಸುವರ್ಣ ಸೌಧದದಲ್ಲಿಯೇ ಹೋಗಿ ಹಲ್ಲೆ ಮಾಡುತ್ತಾರೆ ಎಂದರೆ ಪೊಲೀಸ್ ವ್ಯವಸ್ಥೆ ಏನಾಗಿದೆ. ಬಿಗಿಭದ್ರತೆ ಇಲ್ಲದಂತಾಗಿದೆ. ಹಾಗೊಂದು ವೇಳೆ ಮಾರ್ಷಲ್‌ಗಳು ಇಲ್ಲದಿದ್ದರೇ ಸಿ.ಟಿ. ರವಿ ಅವರ ಜೀವಕ್ಕೆ ಕುತ್ತು ಇತ್ತು. ಹೀಗಾಗಿ, ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಉಗ್ರ ಹೋರಾಟ ಮಾಡುತ್ತೇವೆ ಎಂದರು.