ಬಾಳೆಹೊನ್ನೂರಲ್ಲಿ ಇಬ್ಬರ ಸಾವಿಗೆ ಕಾರಣವಾದ ಪುಂಡಾನೆಗಳ ಸೆರೆಗೆ ಆದೇಶ

KannadaprabhaNewsNetwork |  
Published : Jul 29, 2025, 01:00 AM IST

ಸಾರಾಂಶ

ಚಿಕ್ಕಮಗಳೂರು, ಹೊಸ ಪ್ರದೇಶದಲ್ಲಿ ವನ್ಯಜೀವಿಗಳು ಕಾಣಿಸಿಕೊಂಡಾಗ ನೆರೆ ಜಿಲ್ಲೆಯ ಆನೆ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ನೆರವು ಪಡೆದು ಆನೆ ಗಳನ್ನು ಕಾಡಿಗೆ ಮರಳಿಸಬೇಕು. ಪುಂಡಾನೆ ಇದ್ದರೆ ಸೆರೆ ಹಿಡಿಯಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಆದೇಶ ಹೊರಡಿಸಿದ್ದಾರೆ.

ಮಾನವ-ವನ್ಯಜೀವಿ ಸಂಘರ್ಷ । ನಿರಂತರ ನಿಗಾಕ್ಕೆ ಅಧಿಕಾರಿಗಳಿಗೆ ಅರಣ್ಯ ಸಚಿವರ ಸೂಚನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಹೊಸ ಪ್ರದೇಶದಲ್ಲಿ ವನ್ಯಜೀವಿಗಳು ಕಾಣಿಸಿಕೊಂಡಾಗ ನೆರೆ ಜಿಲ್ಲೆಯ ಆನೆ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ನೆರವು ಪಡೆದು ಆನೆ ಗಳನ್ನು ಕಾಡಿಗೆ ಮರಳಿಸಬೇಕು. ಪುಂಡಾನೆ ಇದ್ದರೆ ಸೆರೆ ಹಿಡಿಯಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಆದೇಶ ಹೊರಡಿಸಿದ್ದಾರೆ.ಯಾದಗಿರಿಯಲ್ಲಿ ಸೋಮವಾರ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಸಚಿವರು, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕು ಬಾಳೆಹೊನ್ನೂರು ಬಳಿ ಕಳೆದ 4 ದಿನಗಳ ಅಂತರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ ಅವರು, ಮಾನವ-ವನ್ಯಜೀವಿ ಸಂಘರ್ಷ ಇರುವ ವಲಯಗಳ ಮೇಲೆ ಉನ್ನತಾಧಿ ಕಾರಿಗಳು ಸತತ ನಿಗಾ ಇಟ್ಟು ಜನರ ಅಮೂಲ್ಯ ಜೀವ ಮತ್ತು ರೈತರ ಬೆಳೆ ರಕ್ಷಣೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಆನೆಗಳು ನಾಡಿನಲ್ಲಿ ಕಾಣಿಸಿಕೊಂಡ ಕೂಡಲೇ ಅರಣ್ಯಾಧಿಕಾರಿಗಳು ಕ್ರಮ ವಹಿಸಬೇಕು. ಸ್ಥಳೀಯರಿಗೆ ಮಾಹಿತಿ ನೀಡ ಬೇಕು. ಆನೆಗಳನ್ನು ಕಾಡಿಗೆ ಮರಳಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ರಾಜ್ಯದೆಲ್ಲೆಡೆ ಮಳೆಯಾಗುತ್ತಿದೆ. ಕೆರೆ, ಕಟ್ಟೆಗಳು ತುಂಬಿವೆ. ಕಾಡಿನಲ್ಲಿ ಹುಲ್ಲು, ಸೊಪ್ಪು, ತೊಗಟೆ ಇತ್ಯಾದಿ ಆಹಾರ ಲಭ್ಯ ವಿದ್ದರೂ ಆನೆಗಳು ಏಕೆ ನಾಡಿಗೆ ಬರುತ್ತಿವೆ ಎಂಬ ಬಗ್ಗೆ ಅಧಿಕಾರಿಗಳು ಗಮನ ಹರಿಸಿ, ಮುಂದೆ ಈ ರೀತಿ ಅನಾಹುತ ಸಂಭವಿಸ ದಂತೆ ಕ್ರಮ ವಹಿಸಬೇಕು. ಆನೆ ಕಂದಕಗಳು ಸತತ ಮಳೆಯಿಂದ ಮುಚ್ಚಿಹೋಗಿವೆ. ಸೌರ ತಂತಿ ಬೇಲಿ, ಟೆಂಟ ಕಲ್ ಫೆನ್ಸಿಂಗ್ ಮರಬಿದ್ದು ಸಂಪರ್ಕ ಕಡಿದುಕೊಂಡಿದೆ ಎಂಬ ದೂರುಗಳಿವೆ. ಕೂಡಲೇ ಇವುಗಳ ನಿರ್ವಹಣೆ ಮಾಡಬೇಕು. ಅರಣ್ಯ ಗಸ್ತು ಸಿಬ್ಬಂದಿ ಈ ಬಗ್ಗೆ ನಿರಂತರವಾಗಿ ನಿಗಾ ಇಟ್ಟು, ಉನ್ನತಾಧಿಕಾರಿಗಳಿಗೆ ವರದಿ ಮಾಡಿ ದುರಸ್ತಿ ಮಾಡಿಸಬೇಕು ಎಂದರು.

ವರ್ಚುವಲ್ ಸಭೆಯಲ್ಲಿ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ, ಉನ್ನತಾಧಿಕಾರಿ ಗಳಾದ ಮನೋಜ್ ರಾಜನ್ ಪಾಲ್ಗೊಂಡಿದ್ದರು.

-- ಬಾಕ್ಸ್--ಬ್ಯಾರಿಕೇಡ್‌ ನಿರ್ಮಾಣಕ್ಕೆ ಅನುಮೋದನೆ:

ಆನೆಗಳಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ಹೆಚ್ಚುವರಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಕೂಡಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಕಾಮಗಾರಿ ಆರಂಭಿಸಿ, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣ ಗೊಳಿಸಿ ಜನರ ಅಮೂಲ್ಯ ಜೀವ ಮತ್ತು ರೈತರ ಬೆಳೆ ರಕ್ಷಣೆಗೆ ಅರಣ್ಯ ಸಿಬ್ಬಂದಿ ಮುಂದಾಗಬೇಕು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಇಷ್ಟು ವರ್ಷಗಳ ಕಾಲ ಕಾಡಾನೆ ಹಾವಳಿಯೇ ಇಲ್ಲದಿದ್ದ ಪ್ರದೇಶಗಳಲ್ಲೂ ಈಗ ಆನೆ-ಮಾನವ ಸಂಘರ್ಷ ಹೆಚ್ಚಳವಾಗುತ್ತಿದೆ. ಯಾವ ಕಾರಣದಿಂದ ಸಂಘರ್ಷ ವಿಸ್ತರಣೆ ಆಗುತ್ತಿದೆ ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿ ಎಂದ ಸಚಿವರು, ಇತ್ತೀಚೆಗೆ ತಾವು ಸಭೆ ನಡೆಸಿ ವನ್ಯಜೀವಿ ಸಂರಕ್ಷಣೆ ಹಾಗೂ ವನ್ಯಜೀವಿಗಳಿಂದ ಮಾನವ ಜೀವ ಹಾನಿ, ಬೆಳೆ ಹಾನಿ ಆಗ ದಂತೆ ನಿಯಂತ್ರಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಕಾವಲು ಕಾಯಲು ಮತ್ತು ಕಾಡಿನಂಚಿನ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲು ಏಕೀಕೃತ ಕಮಾಂಡ್ ಕೇಂದ್ರ ಸ್ಥಾಪಿಸಲು ಸೂಚಿಸಿದ್ದು, ಕೂಡಲೇ ಇದಕ್ಕೆ ರೂಪುರೇಷೆ ಸಿದ್ಧಪಡಿಸಿ ಡಿಪಿಆರ್ ಸಲ್ಲಿಸಲು ತಿಳಿಸಿದರು. ಮುಖ್ಯ ವನ್ಯಜೀವಿ ಪರಿಪಾಲಕರು, ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರತಿ ವೃತ್ತದ, ಸಂಬಂಧಿತ ವಲಯದ ಅಧಿಕಾರಿ ಗಳೊಂದಿಗೆ ವಾರಕ್ಕೊಮ್ಮೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿ, ಸೂಚನೆ ನೀಡಬೇಕು. ಸಂಘರ್ಷ ನಿಯಂತ್ರಣ ಕ್ಕೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.ಹೊರಗುತ್ತಿಗೆ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸಲು ಮತ್ತು ಅವರೆಲ್ಲರಿಗೂ ಅಪಾಯ ಭತ್ಯೆ, ಆಹಾರ ಭತ್ಯೆ ಸಕಾಲದಲ್ಲಿ ಪಾವತಿ ಆಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಸೂಚಿಸಿದ ಸಚಿವರು, ಈ ಬಗ್ಗೆ ಇನ್ನು ಮುಂದೆ ದೂರು ಬಂದರೆ ಸಂಬಂಧಿತ ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ