ಕನ್ನಡಪ್ರಭ ವಾರ್ತೆ ಚಾಮರಾಜನಗರಕಾಂಗ್ರೆಸ್ ಯುವ ನ್ಯಾಯ ಯಾತ್ರೆಯು ಮಾ.೨ ರಂದು ಶನಿವಾರ ನಗರಕ್ಕೆ ಆಗಮಿಸಲಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಬ್ದುಲ್ ಅಜೀಜ್ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರೀಸ್ ನಲಪಾಡ್ ಯುವ ನ್ಯಾಯ ಯಾತ್ರೆಯ ಮೂಲಕ ಪ್ರವಾಸ ಕೈಗೊಂಡಿದ್ದು, ಫೆ.೨೭ರಂದು ಬೀದರ್, ಗುಲ್ಬರ್ಗಾ, ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಿ ೨೮ ರಂದು ಬಾಗಲಕೋಟೆ, ಹುಬ್ಬಳಿ, ಧಾರವಾಡ, ಬೆಳಗಾವಿ, ೨೯ ರಂದು ಹಾವೇರಿ, ದಾವಣಗೆರೆ, ಶಿವಮೊಗ್ಗ, ಮಾರ್ಚ್ ೧ ರಂದು ಚಿತ್ರದುರ್ಗ, ತುಮಕೂರು, ಹಾಸನ, ೨ ರಂದು ಮೈಸೂರು, ಚಾಮರಾಜನಗರ, ರಾಮನಗರ, ೩ ರಂದು ಕೋಲಾರ, ಚಿಕ್ಕಬಳ್ಳಾಪುರ ಸಂಚರಿಸಲಿದೆ. ಮಾರ್ಚ್ ೨ ರಂದು ಜಿಲ್ಲೆಗೆ ಆಗಮಿಸುವ ಯುವ ನ್ಯಾಯ ಯಾತ್ರೆಯನ್ನು ಅದ್ಧೂರಿಯಿಂದ ಸ್ವಾಗತಿಸಿ ಬರಮಾಡಿಕೊಂಡು ನಗರದ ಭ್ರಮರಾಂಭ ಚಿತ್ರಮಂದಿರ ಮುಂಭಾಗದಲ್ಲಿ ಹಮ್ಮಿಕೊಂಡಿದ್ದು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಜಿಲ್ಲೆಯ ಶಾಸಕ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಹೆಚ್.ಎಸ್.ಗಣೇಶ್‌ಪ್ರಸಾದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸುವಂತೆ ಅಬ್ದುಲ್ ಅಜೀಜ್ ತಿಳಿಸಿದ್ದಾರೆ.
ಫ್ರಧಾನಿ ನರೇಂದ್ರಮೋದಿ ಚುನಾವಣೆ ಪೂರ್ವದಲ್ಲಿ ೨ ಕೋಟಿ ಉದ್ಯೋಗ ಕೊಡುವುದಾಗಿ ಭರವಸೆ ನೀಡಿದ್ದರು. ಕಳೆದ ೧೦ ವರ್ಷಗಳಿಂದ ಒಂದು ಉದ್ಯೋಗವನ್ನು ಯುವಕರಿಗೆ ಕೊಟ್ಟಿಲ್ಲ. ಉದ್ಯೋಗ ಕೇಳಿದವರಿಗೆ ಪಕೋಡ ಮಾರಿ ಎಂದು ಹೇಳುತ್ತಾರೆ. ಸುಳ್ಳು ಆಶ್ವಾಸನೆ ಕೊಟ್ಟು ಯುವಕರಿಗೆ ಅನ್ಯಾಯ ಮಾಡಿದ್ದಾರೆ. ಹಾಗೂ ಕೇಂದ್ರ ಸರ್ಕಾರ ವೈಫಲ್ಯಗಳು, ಸಿಎಂ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬರಿಗೆ ತಿಳಿಸಿಕೊಡುವುದು ಯುವ ನ್ಯಾಯ ಯಾತ್ರೆ ಉದ್ದೇಶವಾಗಿದೆ ಎಂದರು.ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ನಾಗೇಂದ್ರನಾಯಕ ಮಾತನಾಡಿ, ಅಂದು ನಮ್ಮ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರೀಸ್ ನಲಪಾಡ್ ಮಧ್ಯಾಹ್ನ ೨ ಗಂಟೆಗೆ ಮೈಸೂರಿನಿಂದ ನೇರವಾಗಿ ಹೆಗ್ಗವಾಡಿ ಗ್ರಾಮದಲ್ಲಿರುವ ಮಾಜಿ ಸಂಸದ ಆರ್.ಧ್ರುವನಾರಾಯಣ್ ಸಮಾಧಿಗೆ ಭೇಟಿ ನೀಡಲಿದ್ದಾರೆ. ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ ಅದ್ದೂರಿ ಸ್ವಾಗತ ಕೋರಲಾಗುತ್ತದೆ. ರಾಜ್ಯಾಧ್ಯಕ್ಷರನ್ನು ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಬೈಕ್ ರ‍್ಯಾಲಿ ಮೂಲಕ ಸ್ವಾಗತ ಮಾಡಿಕೊಂಡು ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಭ್ರಮರಾಂಭ ಚಿತ್ರಮಂದಿರದ ಮುಂಭಾಗದಲ್ಲಿ ನಡೆಯುವ ವೇದಿಕೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾಯಾಧ್ಯಕ್ಷ ಹೊಸಹಳ್ಳಿ ಮಧುಸೂದನ್, ಮಧು ಹೆಬ್ಬಸೂರು, ಜಿಲ್ಲಾ ಉಪಾಧ್ಯಕ್ಷ ಕೆಲ್ಲಂಬಳ್ಳಿ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಯೋಗೇಂದ್ರ, ಟೌನ್ ಅಧ್ಯಕ್ಷ ಸೈಯದ್ ತೌಸೀಫ್ ಹಾಜರಿದ್ದರು.