ಕನ್ನಡಪ್ರಭ ವಾರ್ತೆ ಬೀದರ್ ಕಲೆ ಮತ್ತು ಸಾಹಿತ್ಯ ವ್ಯಕ್ತಿಯ ವಿಕಸನಕ್ಕೆ ರಹದಾರಿ. ಚಂಚಲ ಮನಸ್ಸನ್ನು ಸ್ಥಿರಗೊಳಿಸುವ ಶಕ್ತಿ ಸಂಗೀತಕ್ಕಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಜ್ಯೋತಿರ್ಮಯಾನಂದ ಸ್ವಾಮಿ ನುಡಿದರು.ನಗರದ ರಂಗ ಮಂದಿರದಲ್ಲಿ ಪ್ರಗತಿ ಸಂಗೀತ ಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ಸೌರಭ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಕ್ಕಳ ಮನಸ್ಸು ಮತ್ತು ದೇಹ ಒಟ್ಟಿಗೆ ಕೆಲಸ ಮಾಡಲು ಸಮತೋಲನ ಕಾಪಾಡಿಕೊಳ್ಳಲು ಸಂಗೀತ ಸಹಾಯ ಮಾಡುತ್ತದೆ. ಹಾಗಾಗಿ ಮಕ್ಕಳಿಗೆ ಸಂಗೀತ ಸೇರಿ ಕಲೆಗಳ ಕಲಿಕೆಗೆ ಪಾಲಕರು ಪೋಷಿಸಬೇಕು ಎಂದು ಹೇಳಿದರು.ಬೆಂಗಳೂರಿನ ಹಿರಿಯ ವಿಜ್ಞಾನಿ ಸಂತೋಷ ಆರ್.ಸುತಾರ್ ಮಾತನಾಡಿ, ಸಂಗೀತ ಮತ್ತು ಪರಿಸರಕ್ಕೆ ಅವಿನಾಭಾವ ಸಂಬಂಧ ಇದೆ. ಸಂಗೀತದ ಉಗಮವಾಗಿದ್ದೆ ಪರಿಸರದಿಂದ. ಪಕ್ಷಿಗಳ ಕಲರವದಿಂದ ಅನೇಕ ಸ್ವರ, ರಾಗಗಳು ಹುಟ್ಟಿಕೊಂಡಿವೆ. ಪರಿಕರಗಳು ತಯ್ಯಾರಾಗುವುದು ಮರಗಳಿಂದ. ಸಂಗೀತ ಆಲಿಸುವುದರಿಂದ ಚೈತನ್ಯಪೂರ್ಣ ಜೀವನ ನಮ್ಮದಾಗಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.ಸಂಸ್ಥೆಯ ಅಧ್ಯಕ್ಷ ರಮೇಶ ಕೋಳಾರಕರ್ ಮಾತನಾಡಿ, ಜಿಲ್ಲೆಯಲ್ಲಿ ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳನ್ನು ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯ ಮಕ್ಕಳು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಮೆರೆಯುತ್ತಿರುವುದು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.ಧಾರವಾಡದ ಖ್ಯಾತ ಸಿತಾರ ವಾದಕ ಉಸ್ತಾದ್ ಶಫೀಕ್ ಖಾನ್ ಉದ್ಘಾಟಿಸಿದರು. ಹಿರಿಯ ಸಂಗೀತ ಕಲಾವಿದರಾದ ಪಂ. ರಾಜೇಂದ್ರಸಿಂಗ್ ಪವಾರ್, ಜಗನ್ನಾಥ ನಾನಕೇರಿ, ಮುಖ್ಯ ಪಶು ವೈದ್ಯಾಧಿಕಾರಿ ಗೌತಮ್ ಅರಳಿ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜುಕುಮಾರ ಅತಿವಾಳೆ, ನಾಟ್ಯಶ್ರೀ ನೃತ್ಯಾಲಯದ ಉಷಾ ಪ್ರಭಾಕರ, ಉದ್ಯಮಿ ಸತ್ಯಮೂರ್ತಿ, ಪ್ರಾಂಶುಪಾಲ ಕೆ.ಆರ್ ಗುರುಸ್ಥಲೆ ವೇದಿಕೆಯಲ್ಲಿದ್ದರು. ಸಂಸ್ಥೆಯ ಕಾರ್ಯದರ್ಶಿ ತ್ರೀವೇಣಿ ರಮೇಶ ಪ್ರಾಸ್ತಾವಿಕ ಮಾತನಾಡಿದರು. ಧನಲಕ್ಷ್ಮೀ ಪಾಟೀಲ ನಿರೂಪಿಸಿದರೆ ಶಶಿರೇಖಾ ಏಖ್ಖೆಳ್ಳೆ ಸ್ವಾಗತಿಸಿ ಕಾವ್ಯಶ್ರೀ ಸುತಾರ ವಂದಿಸಿದರು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನರಸಿಂಹಲು ಡಪ್ಪೂರ್ ಸೇರಿದಂತೆ ಸಂಗೀತ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.ಸಂಗೀತ ಸುಧೆ ಹರಿಸಿದ ಮಕ್ಕಳುಪ್ರಗತಿ ಸಂಗೀತ ಕಲಾ ಸಂಸ್ಥೆ ನಗರದ ರಂಗ ಮಂದಿರದಲ್ಲಿ ಆಯೋಜಿಸಿದ್ದ `ಸಂಗೀತ ಸೌರಭ’ದಲ್ಲಿ ಕಲಾಸಕ್ತರು ಶಾಸ್ತ್ರೀಯ ಮತ್ತು ವಚನ ಸಂಗೀತದ ಸುಧೆಯಲ್ಲಿ ಮಿಂದೆದ್ದರು.ಮಕ್ಕಳು, ಖ್ಯಾತ ಕಲಾವಿದರ ಕಂಠಸಿರಿಯಲ್ಲಿ ಮೂಡಿ ಬಂದ ಗಾಯನಕ್ಕೆ ತಲೆದೂಗಿದರು. ಉಸ್ತಾದ್ ಶಫೀಕ್ ಖಾನ್ ಅವರ ಸಿತಾರ ವಾದನ ಜನಮನ ರಂಜೀಸಿತು. ರಾಗ- ರಾಗೇಶ್ರೀ, ಮಿಶ್ರ ಖಮಾಜ ಧುನ್, ತಾಲ್- ವಿಲಂಬಿತ ಝಪತಾಲ್ ನುಡಿಸಿದರು. ಡಾ. ಶ್ರದ್ಧಾ ಪೊದ್ದಾರ್ ಮತ್ತು ಶ್ರೀವರ್ಧನ ಎಕ್ಕೆಳ್ಳೆ ಅವರಿಂದ ಶಾಸ್ತ್ರೀಯ ಗಾಯನ ನಡೆಯಿತು. ಇದಕ್ಕೂ ಮುನ್ನ ವಿದ್ಯಾರ್ಥಿಗಳು ಭಕ್ತಿ ಗೀತೆ, ಸುಗಮ ಸಂಗೀತ ಹಾಗೂ ದೇಶ ಭಕ್ತಿ ಗೀತೆ ಪ್ರಸ್ತುತಪಡಿಸಿದರು. ಇದೇ ವೇಳೆ ಶ್ರೇಯಾ ಕೋಳಾರಕರ್ ನಡೆಸಿಕೊಟ್ಟ ಕಥಕ ನೃತ್ಯ ಪ್ರೇಕ್ಷಕರನ್ನು ಮನಸೋಲುವಂತೆ ಮಾಡಿತು. ರಮೇಶ ಹಾರ್ಮೋನಿಯಂ, ಪ್ರಗತಿ ಪಢಾಗ ಮತ್ತು ರೋಶನ್ ತಬಲಾ ಸಾಥ್ ನೀಡಿದರು.