ಕಲೆ, ಸಾಹಿತ್ಯಕ್ಕೆ ಮನುಷ್ಯರನ್ನು ಸುಸಂಸ್ಕೃತ ಮಾಡುವ ಶಕ್ತಿ ಇದೆ: ಪಂಡಿತಾರಾಧ್ಯ ಶ್ರೀ

KannadaprabhaNewsNetwork | Published : Feb 12, 2024 1:33 AM

ಸಾರಾಂಶ

ಗವಿರಂಗಾಪುರ ಬೆಟ್ಟದಲ್ಲಿ ನಡೆದ ತ್ಯಾಗರಾಜರ ಆರಾಧನಾ ಕಾರ್ಯಕ್ರಮವನ್ನು ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಉದ್ಘಾಟಿಸಿದರು

ಕನ್ನಡಪ್ರಭ ವಾರ್ತೆ ಹೊಸದುರ್ಗ

ಸಾಹಿತ್ಯ, ಸಂಗೀತ, ಕಲೆಗೆ ಮನುಷ್ಯರನ್ನು ಸುಸಂಸ್ಕೃತ ಗೊಳಿಸುವ ಶಕ್ತಿ ಇದೆ ಎಂದು ಸಾಣೆಹಳ್ಳಿ ತರಳಬಾಳು ಶಾಖಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಗವಿರಂಗಾಪುರ ಬೆಟ್ಟ ಪುಣ್ಯಕ್ಷೇತ್ರದಲ್ಲಿ ಆಯೋಜನೆ ಗೊಂಡಿದ್ದ ಕನಾ೯ಟಕ ಸಂಗೀತ ಸಾಮ್ರಾಟ ಶ್ರೀ ತ್ಯಾಗರಾಜರು, ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರು, ದಾಸವರೇಣ್ಯ ಕನಕದಾಸರು, ಬಸವಾದಿ ವಚನಕಾರರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.

ಯಾವ ವ್ಯಕ್ತಿಯಲ್ಲಿ ಸಾಹಿತ್ಯ, ಸಂಗೀತ, ಕಲೆ ಇದೆಯೊ ಆ ವ್ಯಕ್ತಿ ಒಂದು ರೀತಿ ಪಶು ಹಾಗೆ. ಸಂಗೀತಕ್ಕೆ ಮಾರುಹೋಗದ ಮನುಷ್ಯರಿಲ್ಲ. ಸಂಗೀತಕ್ಕೆ ಸಂಸ್ಕಾರಬೇಕು ಆಗಿದ್ದಲ್ಲಿ ಏನನ್ನಾದರು ಸಾಧಿಸಲು ಸಾಧ್ಯ. ದಾಸಶ್ರೇಷ್ಠರು, ವಚನಕಾರರು ಸಂಗೀತ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಸಂಗೀತಕ್ಕೆ ಲಯ, ತಾಳ, ಭಾವ, ಅರ್ಥ ಬಹಳ ಮುಖ್ಯ. ಆ ಮೂಲಕ ಸಂಗೀತ, ಮತ್ತು ವಚನಕಾರರು ಸಮಾಜದಲ್ಲಿ ಮಾನವೀಯ ಮೌಲ್ಯ ಬಿತ್ತಿದರು ಎಂದರು.

ಅಂತರಂಗ ಬಹಿರಂಗ ಶುದ್ಧವಾಗಿದ್ದರೆ, ಭಗವಂತನ ಸಾಕ್ಷ್ಯಾತ್ಕಾರ ಸಾಧ್ಯ ಎಂದ ಅವರು, ಹೆಗ್ಗೆರೆ ರಂಗಪ್ಪ ಮತ್ತು ಸಮಿತಿ ಆಯೋಜನೆ ಗೊಳಿಸಿರುವ ಈ ಕಾರ್ಯಕ್ರಮ ಅಪರೂಪ ಮತ್ತು ಶ್ಲಾಘನೀಯ ಎಂದು ತಿಳಿಸಿದರು .

ಕಾರ್ಯಕ್ರಮದ ಉದ್ಘಾಟಿಸಿದ ಉದ್ಯಮಿ.ಎಸ್. ಪ್ರದೀಪ್ ಮಾತನಾಡಿ, ಸಂಗೀತಕ್ಕೆ ಅಳಿಸುವ ನಗಿಸುವ, ಮಳೆ ಬರಿಸುವ, ಮನುಷ್ಯರನ್ನು ವಿಶ್ವಮಾನವನನ್ನಾಗಿಸುವ ಶಕ್ತಿ ಇದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ದೀಲೀಪ್ ಗುರು ಸ್ವಾಮಿ ಮಾತನಾಡಿ, ಆಧುನಿಕತೆ ಯಿಂದ ನಮ್ಮ ದಾಸಶ್ರೇಷ್ಠರು ವಚನಕಾರರು ಕೊಟ್ಟ ಸಂಗೀತ, ಸಾಹಿತ್ಯ ನಮ್ಮಿಂದ ಬಹುದೂರ ಉಳಿದಿದೆ. ಮತ್ತೆ ಮತ್ತೆ ನಾವು ನಮ್ಮ ಪರಂಪರೆ ಕಲೆ ಉಳಿಸಲು ಇಂತಹ ಕಾರ್ಯಕ್ರಮ ಹೆಚ್ಚು ನಡೆಯುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ತ್ಯಾಗರಾಜರ ಆರಾಧನಾ ಮಹೋತ್ಸವ ಅಧ್ಯಕ್ಷ ಹೆಗ್ಗೆರೆ ರಂಗಪ್ಪ ವಹಿಸಿದ್ದರು.

ಗುಳೇದಗುಡ್ಡ ಶಿವಯೋಗಿ ಮಠದ ಶ್ರೀ ನಾಗಭೂಷಣ ಸ್ವಾಮೀಜಿ, ಬಾಣವರದ ಸಂಗೀತ ವಿದ್ವಾನ್ ಶ್ರೀ ನಂಜುಂಡಪ್ಪ ನವರು, ಹಿರಿಯೂರಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿದ್ವಾನ್ ತಿಪ್ಪೇಸ್ವಾಮಿ ಶಿರಾದ, ವಿದ್ವಾನ್ ರಂಗಸ್ವಾಮಿ, ವಿದೂಷಿ ಜಗದಾಂಬ ಲಕ್ಷ್ಮೀದೇವಮ್ಮ , ಬಿಂದುಶ್ರೀ, ಪಲ್ಲವಿ, ಹರ್ಷಿತಾ ಕವಾಡಿ, ಯಮುನಾ ಕವಾಡಿ, ಶಶಿಕಲಾ, ಹರಿಹರ ಕತ್ತಿಗೆ, ಪರಮೇಶ್ವರಪ್ಪ ಧನಂಜಯ ಮೆಂಗಸಂದ್ರ, ಮೈಸೂರಿನ ರಂಗ ಸಂಗೀತ ರಾಜ್ಯ ಪ್ರಶಸ್ತಿ ವಿಜೇತ ವೈ.ಎಂ ಪುಟ್ಟಣ್ಣಯ್ಯ, ಕವಯಿತ್ರಿ ಕು.ಎಂ, ಆರ್.ನಳಿನ, ಸಿಆರ್‌ಪಿ ಪರಮ್ಮ ಇನ್ನು ಮುಂತಾದವರಿದ್ದರು.

Share this article