ಕಲಾ ಪ್ರಕಾರಗಳು ಬದುಕಿನ ತಾಯಿಬೇರುಗಳಿದ್ದಂತೆ: ಡಾ.ಎ.ಆರ್ .ಗೋವಿಂದಸ್ವಾಮಿ

KannadaprabhaNewsNetwork | Published : Jul 26, 2024 1:35 AM

ಸಾರಾಂಶ

ಹಳ್ಳಿಗಾಡು, ಜಾನಪದ ಸಂಶೋಧನೆಯ ಹಿನ್ನೆಲೆ ಇರುವವರ ಆಲೋಚನಾ ಕ್ರಮವೇ ಪ್ರತಿಯೊಬ್ಬರಲ್ಲೂ ಹೊಸ ಚೈತನ್ಯವನ್ನು ತಂದುಕೊಡಬಲ್ಲದು. ಅಂತಹ ಸಾಂಸ್ಕೃತಿಕ ಪರಂಪರೆಯನ್ನೇ ಉಸಿರಾಗಿಸಿಕೊಂಡು ಪರಿಸರದ ನಡುವಿನಲ್ಲಿ ಇಂಥದೊಂದು ಕೇಂದ್ರ ಸ್ಥಾಪಿಸಿರುವ ಬೈರೇಗೌಡರನ್ನು ಅಭಿನಂದಿಸಲೇಬೇಕು.

ಕನ್ನಡಪ್ರಭ ವಾರ್ತೆ ರಾಮನಗರ

ಸಂಸ್ಕೃತಿ, ರಂಗಭೂಮಿ, ಜಾನಪದ ಮತ್ತು ಸಾಹಿತ್ಯ ಬದುಕಿನ ಎಲ್ಲ ಅಂಗಗಳ ತಾಯಿ ಬೇರು. ಜೀವನದ ದಾರಿಗಳನ್ನು ತೋರಿಸಿಕೊಡುವ ಅಪೂರ್ವ ನೆಲೆ. ಅದರ ಸಮರ್ಥ ಸಂಪರ್ಕಕ್ಕೆ ಬಂದವರು ಎಂದೂ ದಾರಿ ತಪ್ಪುವುದಿಲ್ಲ. ಸೂಕ್ತ ಮಾರ್ಗದರ್ಶನ ನೀಡುವ ಮಹಾಕಾವ್ಯ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ.ಆರ್. ಗೋವಿಂದಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ಕೈಲಾಂಚ ಹೋಬಳಿಯ ಮುದ್ದುಶ್ರೀ ದಿಬ್ಬದಲ್ಲಿ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ 23 ದಿನಗಳ ರಂಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಹಳ್ಳಿಗಾಡು, ಜಾನಪದ ಸಂಶೋಧನೆಯ ಹಿನ್ನೆಲೆ ಇರುವವರ ಆಲೋಚನಾ ಕ್ರಮವೇ ಪ್ರತಿಯೊಬ್ಬರಲ್ಲೂ ಹೊಸ ಚೈತನ್ಯವನ್ನು ತಂದುಕೊಡಬಲ್ಲದು. ಅಂತಹ ಸಾಂಸ್ಕೃತಿಕ ಪರಂಪರೆಯನ್ನೇ ಉಸಿರಾಗಿಸಿಕೊಂಡು ಪರಿಸರದ ನಡುವಿನಲ್ಲಿ ಇಂಥದೊಂದು ಕೇಂದ್ರ ಸ್ಥಾಪಿಸಿರುವ ಬೈರೇಗೌಡರನ್ನು ಅಭಿನಂದಿಸಲೇಬೇಕು ಎಂದರು.

ದಿಕ್ಕು ತಪ್ಪುತ್ತಿರುವ ಯುವ ಜನತೆಗೆ ಮಾರ್ಗದರ್ಶಕವಾಗಬಲ್ಲ ವಸತಿ ಸಹಿತ ರಂಗ ತರಬೇತಿ ಶಿಬಿರ ನಿಜಕ್ಕೂ ಇಲ್ಲಿ ಪಾಲ್ಗೊಂಡವರ ಪಾಲಿನ ಕಾಮಧೇನುವಾಗಬಲ್ಲದು. ನಮ್ಮ ಪೂರ್ವಜರು ಕೇವಲ ಎರಡು ಮೂರು ತಲೆಮಾರಿನಷ್ಟು ಹಿಂದೆ ಬಂದು ಹೋದ ಮಹನೀಯರ ಸಾಧನೆಗಳು ಹೀಗೆಯೇ ಆರಂಭವಾಗಿ ಅವರ ಸಾಧನೆಗೆ ಸೋಪಾನವಾದುದು ಇತಿಹಾಸವೇ ಸರಿ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿದ್ದ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಇದೊಂದು ಮಾದರಿ ಕಾರ್ಯಕ್ರಮ. ನಮ್ಮದು ಸಮೃದ್ಧ ನಿಸರ್ಗ ಮೈಸಿರಿಯನ್ನು ಹೊದ್ದು ಮಲಗಿರುವ ವಿಶಿಷ್ಟ ಬೀಡು. ಬೆಟ್ಟ- ಗುಡ್ಡಗಳ ನಡುವೆ ನಡೆದಾಡುವುದೇ ಒಂದು ಸೊಗಸು. ಸ್ವರ್ಗವನ್ನೂ ಮೀರಿಸುವ ಈ ಸ್ಥಳದಲ್ಲಿ ಒಂದು ಅದ್ಭುತ ಕಾರ್ಯಕ್ರಮ ಜರುಗುತ್ತಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದರು.

ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಮಾತನಾಡಿ, ಹುಟ್ಟು-ಸಾವುಗಳ ನಡುವೆ ನಾವು ಮಾಡುವ ಕಾರ್ಯಗಳು ಶಾಶ್ವತವಾಗಿ ನಿಲ್ಲಬೇಕೆಂಬುದು ನನ್ನಪ್ಪನ ಮಹದಾಸೆ. ಅವರ ಆಸೆಯನ್ನು ಮುದ್ದುಶ್ರೀ ದಿಬ್ಬ ಸಂಸ್ಥಾಪಿಸುವ ಮೂಲಕ ಮತ್ತು ಸದಾ ಚಟುವಟಿಕೆಗಳ ತಾಣವಾಗಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಕಾರ್ಯಕ್ರಮಗಳ ಬಗ್ಗೆ ನನಗೆ ಹೆಮ್ಮೆಯಿದೆ. ಅದೇ ಗುರಿಯನ್ನು ಇಟ್ಟುಕೊಂಡು ರಾಜ್ಯಮಟ್ಟದಲ್ಲಿ ಈ ಶಿಬಿರ ಆಯೋಜಿಸಲಾಗಿದೆ ಎಂದು ನುಡಿದರು.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ.ಆರ್. ಗೋವಿಂದಸ್ವಾಮಿ, ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹಾಗೂ ನಾಟಕ ಅಕಾಡೆಮಿ ಸದಸ್ಯ ಬಾಬು ಕುಂಬಾಪುರ ಅವರನ್ನು ಗೌರವಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಬಾಬು, ರಂಗನಿರ್ದೇಶಕ ನವೀನ್ ಭೂಮಿ ತಿಪಟೂರು, ರಂಗಕರ್ಮಿ, ಸಿನಿಮಾ ತಂತ್ರಜ್ಞ ಕೆ.ಪಿ. ಚಂದ್ರಮೌಳಿ ಉಪಸ್ಥಿತರಿದ್ದರು. ರಾಜ್ಯಾದ್ಯಂತ ಹದಿನೈದು ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.

Share this article