
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಹೊರ ವಲಯದಲ್ಲಿರುವ ದಿ ಕ್ಯಾಪಿಟಲ್ ವಿಲೇಜ್ ರೆಸಾರ್ಟ್‍ನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಮಾ. 8ರವರೆಗೆ ನಡೆಯುವ ರಾಷ್ಟ್ರೀಯ ಮಹಿಳಾ ಕಲಾ ಶಿಬಿರಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಮುಂಬೈಯಲ್ಲಿರುವ ಜೆ.ಜೆ. ಚಿತ್ರಕಲಾ ಶಾಲೆ ಮಾದರಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಕಲಾ ಗ್ಯಾಲರಿ’ ಆರಂಭಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಚಿತ್ರ ರೇಖೆಗಳು ಕಲಾ ಲೋಕದ, ಕಲಾವಿದರ ಭಾವಜೀವದ ಪ್ರತೀಕವಾಗಿದೆ. ಚಿತ್ರೆದ ಬೇರುಗಳ ಆಳ ಅಗಲದ ಚಿಂತನ ಮಂಥನ ಜೊತೆಗೆ ರೇಖೆ ಹುಟ್ಟಿದ ಪರಿ, ಬಣ್ಣ ಲೇಪಿಸಿದ ಚಿತ್ರಗಳು ಪ್ರತಿಯೊಬ್ಬರನ್ನು ಆಕರ್ಷಿಸುತ್ತವೆ. ಇದೊಂದು ಬೌದ್ಧಿಕ ವಿಕಸನದತ್ತ ಚಿತ್ರಗಳು ಸೆಳೆಯುತ್ತವೆ ಎಂದು ವಿವರಿಸಿದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕೊಡಗು ಜಿಲ್ಲೆ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದ್ದು, ಇಂತಹ ಪ್ರದೇಶದಲ್ಲಿ ಕಲಾ ಶಿಬಿರ ಏರ್ಪಡಿಸಿರುವುದು ವಿಶೇಷವೇ ಸರಿ ಎಂದು ಹೇಳಿದರು.
ಕೊಡಗು ಜಿಲ್ಲೆಯ ಹಬ್ಬಗಳು, ಕಲೆಗಳು ಮತ್ತು ಸಂಸ್ಕೃತಿ ಬಗ್ಗೆ ಚಿತ್ರಕಲೆಗಳ ಮೂಲಕ ಬೆಳಕು ಚೆಲ್ಲಬಹುದಾಗಿದೆ ಎಂದರು. ಸೋಮವಾರಪೇಟೆ ತಾಲೂಕಿನ ಚಿತ್ರಕಲಾವಿದ ಜಿ.ಎಸ್. ಭವಾನಿ ಮಾತನಾಡಿ, ಪ್ರತಿಯೊಬ್ಬರ ಮನಸ್ಸನ್ನು ಸೆಳೆಯುವಲ್ಲಿ ಚಿತ್ರಕಲೆಗಳು ಸಹಕಾರಿಯಾಗಿವೆ. ಇಲ್ಲಿನ ಮರ ಗಿಡಗಳು, ನದಿ, ತೊರೆಗಳು, ಜಲಪಾತಗಳು, ಬೆಟ್ಟಗುಡ್ಡಗಳು, ನೋಡುಗರನ್ನು ಮತ್ತೆ ಮತ್ತೆ ನೋಡುವಂತೆ ಮಾಡುತ್ತವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಚಿತ್ರಕಲೆ ಮೂಲಕ ಅನಾವರಣಗೊಳಿಸುವಂತಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಮಾತನಾಡಿ, ಚಿತ್ರಕಲೆಗಳು ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿದ್ದು, ಚಿತ್ರ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.ಕರ್ನಾಟಕ ಲಲಿತಾ ಕಲಾ ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತ ಮಾತನಾಡಿ, ಕರ್ನಾಟಕ ಲಲಿತಾ ಕಲಾ ಅಕಾಡೆಮಿ ವತಿಯಿಂದ ಮಹಿಳೆಯರಿಗಾಗಿಯೇ ರಾಷ್ಟ್ರೀಯ ಮಹಿಳಾ ಕಲಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಮಹಿಳಾ ಕಲಾ ಶಿಬಿರದಲ್ಲಿ ಗೌರಿ ವಿಮುಲ (ಹೈದರಾಬಾದ್), ಹರ್ಷದ ಕೇರ್‍ಕರ್ (ಗೋವಾ), ಜಿಜ್ಞಾಶಾ ಓ.ಜಾ (ಬರೋಡ), ಸ್ವಾತಿ ವಿ. ಸಬಲೆ (ಮುಂಬೈ), ಆರ್. ಉಷಾದೇವಿ (ತಮಿಳುನಾಡು), ಅರ್ಮ ಖಾನ್ (ಧಾರಾವಾಡ), ಜೋಶೀಲಾ ಎಸ್.ವಿ (ಬೆಂಗಳೂರು), ಸರೋಜ ಮುಂಡೇವಾಡಿ (ಗದಗ), ಸಬ್ರಿನ್ ತಾಜ್ (ದಾವಣಗೆರೆ), ಮೇಘ ಆರ್.(ಕಲಬುರಗಿ), ಸಂಧ್ಯಾರಾಣಿ ದೊಡ್ಡಮನಿ (ಬೆಳಗಾವಿ), ಸ್ಫೂರ್ತಿ (ಮಂಗಳೂರು), ದ್ರಾಕ್ಷಾಯಿಣಿ ಜಿ. ಇಮ್ನಾದ (ವಿಜಯಪುರ), ಪೂಜಾ ಎಚ್. (ಬೆಂಗಳೂರು) ಮತ್ತು ಕಾವೇರಿ ಪೂಜಾರ್ (ಬಾಗಲಕೋಟೆ), ಹೀಗೆ 14ಕ್ಕೂ ಹೆಚ್ಚು ಮಂದಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಚಿತ್ರಕಲಾ ಶಿಬಿರದಲ್ಲಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದರು.ಕಲಾವಿದರಾದ ರೂಪೇಶ್ ನಾಣಯ್ಯ, ಬಾಬು ರಾವ್ ನಡೋಣಿ, ಮಣಜೂರು ಮಂಜುನಾಥ್ ಇದ್ದರು. ಅಕಾಡೆಮಿ ಸದಸ್ಯ ಸಂಚಾಲಕ ಆಶಾರಾಣಿ ಬಿ. ನಡೋಣಿ ಸ್ವಾಗತಿಸಿದರು. ರಾಜೇಶ್ವರಿ ಎಂ. ಮೊಪಗಾರ ವಂದಿಸಿದರು. ರಾಷ್ಟ್ರೀಯ ಮಹಿಳಾ ಕಲಾ ಶಿಬಿರದಲ್ಲಿ ಮಂಜು ಮತ್ತು ತಂಡದವರಿಂದ ವೀರಗಾಸೆ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ವೆಂಕಟೇಶ್ ನಿರೂಪಿಸಿದರು.
ಚಿತ್ರಕಲೆಗಳನ್ನು ಗುರುತಿಸುವಂತಾಗಬೇಕು. ಒಂದೊಂದು ಚಿತ್ರಕಲೆಗೆ ಬೆಲೆ ಕಟ್ಟಲಾಗದು. ರೇಖೆಗಳು ಬಣ್ಣಗಳ ಪ್ರಯೋಗಾತ್ಮಕ ಕ್ರೀಯೆಯ ಜೊತೆಗೆ ಅಕ್ಷರಗಳ ರೂಪದಲ್ಲಿ ಅನೇಕ ಕಾರ್‍ಯವಿಧಾನಗಳನ್ನು ಸುಗಮಗೊಳಿಸುತ್ತ ತನ್ನ ಇರುವಿಕೆಯನ್ನು ಚಿತ್ರಕಲೆಗಳು ಸ್ಪಷ್ಟ ಪಡಿಸುತ್ತಾ ಹೋಗುತ್ತವೆ.-ಪರಶುರಾಮ್ ಸಂಪತ್ ಕುಮಾರ್, ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ