ಭೀಮಣ್ಣ ಗಜಾಪುರ
ಕೂಡ್ಲಿಗಿ: ತಾಲೂಕಿನ ಗುಡೇಕೋಟೆ ಕರಡಿ ಧಾಮದಲ್ಲಿ ಕರಡಿಗಳಿಗೆ ರಕ್ಷಣೆ ಇಲ್ಲ. ಕರಡಿಯಿಂದ ರೈತರಿಗೂ ರಕ್ಷಣೆ ಇಲ್ಲದಂತಾಗಿದೆ. ಇಲ್ಲಿವರೆಗೂ ಗುಡೇಕೋಟೆ, ಹೊಸಹಳ್ಳಿ ಹೋಬಳಿಗಳ ಹತ್ತಾರು ಹಳ್ಳಿಗಳಲ್ಲಿ 60ಕ್ಕೂ ಹೆಚ್ಚು ರೈತರು ಕರಡಿ ದಾಳಿಯಿಂದ ಶಾಶ್ವತ ಅಂಗವಿಕಲರಾಗಿದ್ದು, 25 ವರ್ಷಗಳಲ್ಲಿ 25ಕ್ಕೂ ಹೆಚ್ಚು ರೈತರು ಕರಡಿ ದಾಳಿಯಿಂದ ಸಾವನ್ನಪ್ಪಿದ ಪ್ರಕರಣಗಳಿವೆ.ಅಧಿಕಾರಿಗಳು ಕರಡಿ ದಾಳಿಯಾದಾಗ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆಯೇ ವಿನಃ ಇಲ್ಲಿವರೆಗೆ ಕರಡಿ ದಾಳಿಗೆ ಕಾರಣ ಏನು? ನಿಯಂತ್ರಣ ಮಾಡುವುದು ಹೇಗೆ ಎನ್ನುವ ಗೋಜಿಗೆ ಹೋಗಿಲ್ಲ. ಇದೇ ಮಾ.2ರಂದು ಓಬಯ್ಯ ಎನ್ನುವ ಕುರಿಗಾಹಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿಯ ರೈತರ ಗೋಳು ಕೇಳುವವರಾರು? ಕರಡಿಗಳ ಸಾವಿಗೆ ನ್ಯಾಯ ನೀಡುವರಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ತಾಲೂಕಿನ ಭೀಮಸಮುದ್ರ, ಕಡೇಕೊಳ, ಗುಡೇಕೋಟೆ, ಹಾಲಸಾಗರ, ಮಹದೇವಪುರ, ಅಪ್ಪೇನಹಳ್ಳಿ, ಮಾಕನಡಕು, ಗೆದ್ದಲಗಟ್ಟೆ ಗ್ರಾಮಗಳಲ್ಲಂತೂ ಜಾಂಬುಕ ಉಪಟಳ ಹೆಚ್ಚಿದೆ. ವರ್ಷಕ್ಕೆ ಐದಾರು ಕರಡಿ ದಾಳಿ ಪ್ರಕರಣಗಳು ಈ ಹಳ್ಳಿಗಳಲ್ಲಿ ನಡೆಯುತ್ತಿವೆ.ಗ್ರಾಮ ತೊರೆದಿದ್ದ ಜನತೆ:
ಇಲ್ಲಿಯ ಜನತೆ ಹಾಡುಹಗಲೇ ಒಬ್ಬರೇ ತಮ್ಮ ಜಮೀನುಗಳಿಗೆ ಹೋಗಲು ಭಯಪಡುತ್ತಾರೆ. ಇಲ್ಲಿಯ ಮಕ್ಕಳಂತೂ ಸ್ಕೂಲ್, ಕಾಲೇಜುಗಳಿಗೆ ಬಸ್ ತಪ್ಪಿದರೆ ನಡೆದುಕೊಂಡು ಹೋಗಲು ಭಯ ಪಡುತ್ತಿದ್ದಾರೆ. ಕರಡಿಗಳ ಮಾರಣಾಂತಿಕ ದಾಳಿಯಿಂದ ಬೆಚ್ಚಿ ಬಿದ್ದಿರುವ ಜನತೆ ರಾತ್ರಿ ಕೂಡ ಮನೆಯಿಂದ ಹೊರಗೆ ಬರುವುದಿಲ್ಲ. 2005-06ರಲ್ಲಿ ಐದಾರು ಬಾರಿ ನಡೆದ ಕರಡಿ ದಾಳಿಗಳು ಭೀಮಸಮುದ್ರ ಕಡೇಕೊಳ ಗ್ರಾಮಸ್ಥರನ್ನು ಗ್ರಾಮ ತೊರೆಯುವಂತೆ ಮಾಡಿದ್ದವು.
ಕರಡಿ ದಾಳಿಯಿಂದ ಪ್ರತಿವರ್ಷ ಸರಾಸರಿ ಒಬ್ಬ ರೈತ ಅಸುನೀಗಿದ್ದಾನೆ. ಪ್ರತಿವರ್ಷ 5-6 ರೈತರು ಶಾಶ್ವತ ಅಂಗವಿಕಲರಾಗುತ್ತಾರೆ. ಭೀಮಸಮುದ್ರ, ಕಡಾಕೊಳ್ಳ ಗ್ರಾಮಗಳಲ್ಲೊಂದೇ 35ಕ್ಕೂ ಹೆಚ್ಚು ರೈತರು ಕರಡಿ ದಾಳಿಗಳಿಂದ ಅಂಗವಿಕಲರಾಗಿದ್ದಾರೆ. ಇವರಿಗೆ ಅಂಗವಿಕಲ ವೇತನ ಬರುತ್ತಿಲ್ಲ. ಗಾಯಗಳಾದರೆ ಸಾವಿರಾರು ರುಪಾಯಿ ಪರಿಹಾರ ನೀಡುತ್ತಾರೆ. ಇದು ಆಸ್ಪತ್ರೆಗೆ ಖರ್ಚಿಗೆ ಸಾಕಾಗುವುದಿಲ್ಲ. ಇನ್ನು ಅವರ ಮುಂದಿನ ಬದುಕು ಮಾತ್ರ ನಿತ್ಯ ಇನ್ನೊಬ್ಬರ ಆಶ್ರಯದಲ್ಲಿಯೇ ನಡೆಯುವಂತಾಗಿದೆ. ಆದರೆ ಸರ್ಕಾರ ಮಾತ್ರ ಇವರ ನೆರವಿಗೆ ಬಂದಿಲ್ಲ.
ಕನ್ಯೆ ಕೊಡುತ್ತಿಲ್ಲ:ಕರಡಿ ದಾಳಿಯ ಭಯದಿಂದ ಇಲ್ಲಿಯ ಗ್ರಾಮಗಳ ಜನತೆಗೆ ಬೇರೆ ಊರವರು ಕನ್ಯೆ ಕೊಡದಿದ್ದಕ್ಕೆ ಕೆಲವು ಕುಟುಂಬಗಳು ಊರು ತೊರೆದಿವೆ. ಜನಪ್ರತಿನಿಧಿಗಳು, ಅರಣ್ಯ ಇಲಾಖೆ ಇಲ್ಲಿಯ ರೈತರ ನೆರವಿಗೆ ಬಾರದಿದ್ದಲ್ಲಿ ಜನತೆ ಬೀದಿಗಿಳಿದು ಹೋರಾಟ ಮಾಡುವ ಕಾಲ ದೂರವಿಲ್ಲ.
ನಮ್ಮೂರಲ್ಲಿ ತೋಟಗಳು ಹೆಚ್ಚಿವೆ. ಕಾಡಲ್ಲಿ ಆಹಾರ ಇಲ್ಲದೇ ತೋಟಕ್ಕೆ ಹಾಡುಹಗಲೇ ನುಗ್ಗಿ ಜನರ ಮೇಲೆ ಕರಡಿಗಳು ದಾಳಿ ಮಾಡುತ್ತಿವೆ. ನಮ್ಮ ಜೀವಕ್ಕೆ ರಕ್ಷಣೆಯೇ ಇಲ್ಲವಾಗಿದೆ. ಸಾಯುವುದು ಪರವಾಗಿಲ್ಲ. ಕಣ್ಣಿಲ್ಲದೇ ಕಾಲಿಲ್ಲದೇ ಬದುಕುವುದು ಹೇಗೆ ಸರ್? ನಮಗ್ಯಾರು ದುಡಿದು ಹಾಕ್ತಾರೆ. ತಾಲೂಕು ಅಧಿಕಾರಿಗಳ ಹತ್ತಿರ ಹೋದರೆ ನಿಮಗೆ ಅಂಗವಿಕಲ ವೇತನ ಬರುವುದಿಲ್ಲ ಅಂತಾರೆ. ಹೀಗಾದ್ರೆ ನಾವು ಜೀವನ ಹೇಗೆ ಮಾಡಬೇಕು? ಎನ್ನುತ್ತಾರೆ ಕಡಾಕೊಳ್ಳ ಗ್ರಾಮ ನಿವಾಸಿ, ಕರಡಿ ದಾಳಿಯಿಂದ ಅಂಗವಿಕಲನಾದ ಪೂಜಾರಿ ರಾಜಪ್ಪ.ಗುಡೇಕೋಟೆ ಕರಡಿ ಧಾಮದಲ್ಲಿ ಹಂತ ಹಂತವಾಗಿ ಕಾಮಗಾರಿಗಳು ನಡೆಯುತ್ತಿವೆ. ಕಾಡಲ್ಲಿ ಆಹಾರ, ನೀರು ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದೇವೆ. ಕರಡಿಗಳು ತೋಟದಲ್ಲಿರುವ ಹಣ್ಣು- ಹಂಪಲುಗಳಿಗಾಗಿ ರೈತರ ಜಮೀನುಗಳಿಗೆ ಲಗ್ಗೆ ಇಡುತ್ತಿವೆ. ಜೀವಭಯದಿಂದ ಕರಡಿಗಳು ರೈತರ ಮೇಲೆ ದಾಳಿ ಮಾಡುತ್ತಿವೆ. ರೈತರು ಕರಡಿಗಳು ಕಾಣಿಸಿಕೊಂಡಾಗ ಕಿರುಚಾಡುವುದು, ಓಡಿಸುವುದು ಮಾಡಿದರೆ ಅದು ಕಂಗೆಟ್ಟು ದಾರಿಯಲ್ಲಿ ಹೋಗುವ ಅಮಾಯಕರ ಮೇಲೆ ದಾಳಿ ಮಾಡುತ್ತದೆ. ಕರಡಿ ದಾಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಕೂಡ್ಲಿಗಿ ತಾಲೂಕು ಗುಡೇಕೋಟೆ ವಲಯ ಅರಣ್ಯಾಧಿಕಾರಿ ಜಗದೀಶ್ ಮೇಧಾ.