ಕುರುಗೋಡು: ಕಲೆಗಳು ದಣಿದಿರುವ ಮನಗಳಿಗೆ ಉಲ್ಲಾಸವನ್ನು ನೀಡುವ ಮತ್ತು ಶ್ರೀಸಾಮಾನ್ಯರಿಗೆ ಜೀವನಾನುಭವದ ಅರಿವನ್ನು ನೀಡುವ ಜ್ಞಾನದ ನೆಲೆಗಳಾಗಿವೆ ಎಂದು ದಮ್ಮೂರಿನ ಶ್ರೀ ದಮ್ಮೂರು ಲಿಂಗೇಶ್ವರ ಮತ್ತು ಶ್ರೀಬನಶಂಕರಿದೇವಿ ಶಕ್ತಿ ಪೀಠದ ಶ್ರೀ ಗೋವರ್ಧನಾನಂದಪುರಿ ಮಹಾಸ್ವಾಮಿಗಳು ಹೇಳಿದರು.
ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವುದರಿಂದ ಸಾಂಸ್ಕೃತಿಕ ವಾತಾವರಣ ಬೆಳೆದು ಜನರಲ್ಲಿನ ವೈಮನಸ್ಸಿದ ಗುಣಗಳು ದೂರವಾಗುತ್ತದೆ ಎಂದು ಹೇಳಿದರು.
ಬಾದನಹಟ್ಟಿ ಕರಿಬಸಯ್ಯಸ್ವಾಮಿಗಳು ಮಾತನಾಡಿ, ಬಯಲಾಟ ಕಲೆಯ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ರಂಗಬಸವೇಶ್ವರ ಕಲಾ ಟ್ರಸ್ಟಿನ ಕಾರ್ಯದರ್ಶಿ ಹುಲುಗಯ್ಯ ನಾಯಕ ಮಾತನಾಡಿ, ನುಡಿಯಲ್ಲಿ ಸ್ಥಳೀಯ ಮಟ್ಟದಲ್ಲಿ ರಂಗಕಲೆಯನ್ನು ಉಳಿಸಿ-ಬೆಳೆಸುವ ಮನಸ್ಸುಗಳು ಯಥೇಚ್ಛವಾಗಿದ್ದು ಆ ಮನಸ್ಸುಗಳ ಅಗಾಧವಾದ ಪ್ರೋತ್ಸಾಹದಿಂದ ನಮ್ಮ ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಲೆಗಳು ಇಂದಿಗೂ ಜೀವಂತವಾಗಿರಲು ಸಾಧ್ಯವಾಗಿದೆ. ಹಳ್ಳಿಯಿಂದಲೇ ದಿಲ್ಲಿಯ ಮಟ್ಟಕ್ಕೆ ಹೋಗುವ ಕಲಾವಿದರು ಬೆಳೆಯಲು ಸಾಧ್ಯ. ಹಳ್ಳಿಯಲ್ಲಿರುವ ಮೂಲ ಕಲಾವಿದರು ನಮ್ಮ ಸಂಸ್ಕೃತಿಯ ಮೂಲ ಕಲೆಯನ್ನು ಬೆಳೆಸುವಲ್ಲಿ ಸದಾ ಕಾಲ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಳ್ಳಿಯಲ್ಲಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಗಮನ ಹರಿಸಬೇಕು. ಈ ಭಾಗಗಳಲ್ಲಿ ರಂಗಮ೦ದಿರಗಳ ನಿರ್ಮಾಣವಾಗಬೇಕು ಎಂದರು.
ಸುಗಮ ಸಂಗೀತ ಬಸವರಾಜ, ಬಿ. ಲೋಕೇಶ ಮತ್ತು ಗುಡ್ರು ಮಲ್ಲಪ್ಪ ತಂಡದವರಿ೦ದ ಹಾಗೂ ಭರತನಾಟ್ಯ ಸಮೂಹ ನೃತ್ಯ ಶ್ರೀ ನಾಟ್ಯ ಭೈರವಿ ಕಲಾ ಕೇಂದ್ರ ಕುರುಗೋಡು ಹಾಗೂ ಜನಪದ ಗಾಯನ ಎಂ. ಕರಿಬಸಪ್ಪ, ಬ್ಯಾಡಗಿ ಹನುಮಂತಪ್ಪ ಮತ್ತು ವಿ.ತಿಮ್ಮಾರೆಡ್ಡಿ ತಂಡದವರಿಂದ, ಅಪೂರ್ವ ಮತ್ತು ಕಾವೇರಿ ತಂಡದವರಿ೦ದ ಜನಪದ ನೃತ್ಯ ಪ್ರದರ್ಶಿಸಲ್ಪಟ್ಟಿತು.ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಹಂದ್ಯಾಳ್, ಒಕ್ಕೂಟದ ತಾಲೂಕು ಅಧ್ಯಕ್ಷ ಎಂ. ಪಾರ್ವತೀಶ್, ಗಣಪತಿ, ಚಂದ್ರಶೇಖರ್ ಆಚಾರ್, ಮೌನೇಶ್ ತ೦ಡದವರಿ೦ದ ದನ ಕಾಯುವರ ದೊಡ್ಡಾಟ ಅರ್ಥಾತ್ ದ್ರೌಪದಿಯ ವಸ್ತ್ರಾಪಹರಣ ಎಂಬ ನಾಟಕ ಪ್ರದರ್ಶನಗೊಂಡಿತು.
ಪ್ರಮುಖರಾದ ಸಣ್ಣೆರೆಪ್ಪ, ತಿಮ್ಮಾರೆಡ್ಡಿ, ಡಾಕ್ಟರ್ ಆಚಾರ್ಯ, ತಿಪ್ಪೇರುದ್ರಸ್ವಾಮಿ, ದಿವಾಕರ್, ಎರಿಸ್ವಾಮಿ ಇತರರಿದ್ದರು.