ಮನುಷ್ಯತ್ವವಿರದ ಕಲೆ, ಸಾಹಿತ್ಯ, ಸಂಸ್ಕೃತಿಗೆ ಅರ್ಥವಿಲ್ಲ

KannadaprabhaNewsNetwork | Published : Apr 14, 2025 1:24 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮನುಷ್ಯ ಸಂಬಂಧಗಳ ಹುಡುಕಾಟವೇ ಸಾಂಸ್ಕೃತಿಕ ಆಂದೋಲನವಾಗಬೇಕು. ಮನುಷ್ಯತ್ವ ಇರದ ಕಲೆ, ಸಾಹಿತ್ಯ, ಸಂಸ್ಕೃತಿ ಉತ್ಸವಗಳಿಗೆ ಅರ್ಥವಿಲ್ಲ. ದೇಶವೆಂದರೆ ಬರಿ ಮಣ್ಣಲ್ಲ, ಕುರ್ಚಿಯಲ್ಲ. ನಾವು ಜಾತಿ-ಧರ್ಮಗಳ ಮಧ್ಯವರ್ತಿಗಳಾಗದೇ ಸತ್ಯದ ಮಧ್ಯವರ್ತಿಗಳಾಗಬೇಕು ಎಂದು ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮನುಷ್ಯ ಸಂಬಂಧಗಳ ಹುಡುಕಾಟವೇ ಸಾಂಸ್ಕೃತಿಕ ಆಂದೋಲನವಾಗಬೇಕು. ಮನುಷ್ಯತ್ವ ಇರದ ಕಲೆ, ಸಾಹಿತ್ಯ, ಸಂಸ್ಕೃತಿ ಉತ್ಸವಗಳಿಗೆ ಅರ್ಥವಿಲ್ಲ. ದೇಶವೆಂದರೆ ಬರಿ ಮಣ್ಣಲ್ಲ, ಕುರ್ಚಿಯಲ್ಲ. ನಾವು ಜಾತಿ-ಧರ್ಮಗಳ ಮಧ್ಯವರ್ತಿಗಳಾಗದೇ ಸತ್ಯದ ಮಧ್ಯವರ್ತಿಗಳಾಗಬೇಕು ಎಂದು ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ ಅಭಿಪ್ರಾಯಪಟ್ಟರು.

ಆವಿಷ್ಕಾರ, ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಮ್‌ಎಸ್‌ಎಸ್ ಸಂಘಟನೆಗಳ ನೇತೃತ್ವದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ 14ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ನಮ್ಮ ಮಧ್ಯ ಬರೆಯದ ಬರಹಗಾರರಿದ್ದಾರೆ, ಹಾಡದ ಹಾಡುಗಾರರಿದ್ದಾರೆ, ನರ್ತಿಸದ ನರ್ತಕಿಯರಿದ್ದಾರೆ. ಅಂತಹವರ ಬಗ್ಗೆ ನಾವು ಹಾಡಬೇಕು, ಬರೆಯಬೇಕು. ಇಂದು ಮುಖಂಡರು, ಅಧಿಕಾರಿಗಳು ಭ್ರಷ್ಟರಾಗುವ ಜೊತೆಗೆ ಲೇಖನ ಸಹ ಭ್ರಷ್ಟವಾಗಿದೆ. ಹೀಗಾದರೆ ರಕ್ಷಣೆ ಎಲ್ಲಿ ?. ನಮ್ಮನ್ನು ನಾವು ಕಂಡು ಕೊಳ್ಳುವುದೇ ಇದಕ್ಕೆ ಪರಿಹಾರ. ತನ್ನ ಸಮುದಾಯವನ್ನೂ ಮೀರಿ ಜನಸಾಮಾನ್ಯರಿಗೆ ನಾಯಕರಾದ ಜ್ಯೋತಿಬಾ ಫುಲೆಯಂತವರು ನಮಗೆ ಆದರ್ಶವಾಗಬೇಕು ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯ ಅಧ್ಯಕ್ಷ ಕಾ. ಕೆ.ಸೋಮಶೇಖರ ಮಾತನಾಡಿ, ಮೂಲ ಸೌಲಭ್ಯ, ವಿಜ್ಞಾನಗಳ ಅಭಿವೃದ್ಧಿಗಿಂತ ನೀತಿ, ಸಂಸ್ಕೃತಿ, ಮೌಲ್ಯಗಳ ಅಭಿವೃದ್ಧಿ ನಿಜವಾದ ಅಭಿವೃದ್ಧಿ. ಇಂದಿನ ಸಮಾಜದ ಪ್ರಗತಿಗೆ ಪೂರಕವಾದದ್ದನ್ನು ಮಾತ್ರ ನಾವು ಇತಿಹಾಸದಿಂದ ಅನುಸರಿಸಬೇಕು. ಹೊರತು ಜನರನ್ನು ಒಡೆದು ಆಳುವ ಇತಿಹಾಸ, ಸಂಸ್ಕೃತಿಯನ್ನು ಇತಿಹಾಸದಲ್ಲಿ ಇದ್ದರೂ ಅದನ್ನು ಅನುಸರಿಸಬಾರದು ಎಂದರು.

ರಂಗಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಸಾಹಿತಿ ಮನು ಪತ್ತಾರ ಉದ್ಘಾಟಿಸಿದರು.

ಎಐಡಿಎಸ್‌ಒನ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಎಮ್‌ಎಸ್‌ಎಸ್‌ನ ಜಿಲ್ಲಾಧ್ಯಕ್ಷೆ ಗೀತಾ.ಎಚ್ ಹಾಗೂ ಆವಿಷ್ಕಾರದ ಮುಖಂಡರಾದ ಅಶೋಕ ದೇಸಾಯಿ ಉಪಸ್ಥಿತರಿದ್ದರು. ಹಾಗೂ ಎಐಡಿವೈಓನ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಂತರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ವಿಜಯಪುರದ ವಿದೂಷಿ ಲಕ್ಷ್ಮಿ ತೇರದಾಳಮಠ ಅವರ ನಾಟ್ಯಕಲಾ ಡಾನ್ಸ್ ಕ್ಲಾಸ್‌ನವರ ನೃತ್ಯ ರೂಪಕ, ಧಾರವಾಡ ಆಕಾಶವಾಣಿಯ ಬಿ ಹೈಗ್ರೇಡ್ ಕಲಾವಿದೆ ಕೃತಿಕಾ ಜಂಗಿನಮಠ ಅವರ ಕೊಳಲು ವಾದನ ಹಾಗೂ ವಿಜಯಪುರದ ಸ್ವಯಂಭು ಆರ್ಟ್ ಫೌಂಡೇಶನ್‌ನ ನಟಿ ಹಾಗೂ ಭರತನಾಟ್ಯ ಕಲಾವಿದೆ ವಿದೂಷಿ ದೀಕ್ಷಾ ಭೀಸೆ ಹಾಗೂ ದಿವ್ಯಾ ಭೀಸೆ ಮತ್ತು ತಂಡದವರ ನೃತ್ಯ ಪ್ರದರ್ಶನಗಳು ಜನರ ಗಮನ ಸೆಳೆದವು. ಹಾಗೂ ಬಾದಲ್ ಸರ್ಕಾರ ರಚಿಸಿದ, ರಾಜೇಂದ್ರ ಕಾರಂತ್ ಅವರು ಕನ್ನಡಕ್ಕೆ ರೂಪಾಂತರಿಸಿದ ನಾಟಕ ಮೋಜಿನ ಸೀಮೆಯಾಚೆ ಒಂದೂರು ಒಂದು ಸುಂದರ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿತು.

Share this article