ಕೆಎಲ್‌ಕೆ ಮೈದಾನದಲ್ಲಿ ‘ನಡಿಗೆ ಪಥ’ ಕಾಮಗಾರಿಗೆ ಭೂಮಿಪೂಜೆ
ಕೆಎಲ್‌ಕೆ.ಕಾಲೇಜು ಮೈದಾನದಲ್ಲಿ ವಾಕಿಂಗ್ ಟ್ರಾಕ್ ಮಾಡಬೇಕೆಂದು ಒತ್ತಾಯವಿದೆ. ಮಳೆ ಬಂದರೆ ಕೆಸರಾಗುವ ಮೈದಾನದಲ್ಲಿ ಕ್ರೀಡೆಗಳನ್ನು ಆಡಲು ಸಾಧ್ಯವಾಗುವುದಿಲ್ಲ. ವಾಕಿಂಗ್ ಟ್ರ್ಯಾಕ್‌ನಿಂದ ಯುವಜನತೆ ಹಾಗೂ ಇತರರ ಕ್ರೀಡೆ, ನಡಿಗೆಗೆ ಸಹಕಾರಿಯಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ನಗರದಲ್ಲಿ ಶನಿವಾರ ಕೆ.ಎಲ್.ಕೆ ಮೈದಾನದಲ್ಲಿ ನಗರೋತ್ಥಾನ 4ರ ಯೋಜನೆಯಡಿ ವಾಕಿಂಗ್ ಟ್ರಾಕ್ ಮಾಡಲು ಇಂಟರ್ ಲಾಕ್ ಪಾತ್ ವೇ ಮತ್ತು ಪುರಸಭೆ ಹಿಂಭಾಗದಲ್ಲಿ ಪೌರಕಾರ್ಮಿರಿಗೆ ವಿಶ್ರಾಂತ ಗೃಹ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಮಳೆಗಾಲದಲ್ಲಿ ಮೈದಾನ ಕಪ್ಪುಮಣ್ಣಿರುವ ಕಾರಣ ಕೆಸರಿನಿಂದ ಕಾಲಿಡಲು ಸಹ ಆಗುವುದಿಲ್ಲ. ಇಲ್ಲಿ ವಾಕಿಂಗ್ ಟ್ರ್ಯಾಕ್ ಮಾಡಿದರೆ ಈ ಸಮಸ್ಯೆ ತಪ್ಪುತ್ತದೆ ಎನ್ನುವ ನಿಟ್ಟಿನಲ್ಲಿ 39 ಲಕ್ಷ ರು. ವೆಚ್ಚದಲ್ಲಿ 400 ಮೀ. ಇಂಟರ್ ಲಾಕ್‌ಪಾತ್ ವೇ ಶೀಘ್ರವೇ ನಿರ್ಮಾಣವಾಗುತ್ತದೆ. ಇದರಿಂದ ಯುವಜನತೆಯ ಕ್ರೀಡೆಗೂ ಉತ್ತೇಜನ ಸಿಗುತ್ತದೆ. ಮುಂದಿನ ದಿನಗಳಲ್ಲಿ ಈ ಮೈದಾನವನ್ನು ತಾಲೂಕು ಮಟ್ಟದ ಕ್ರೀಡಾಂಗಣ ಮಾಡಿಕೊಡಲು ಶ್ರಮಿಸಲಾಗುವುದು ಎಂದರು.
ಪುರಸಭೆ ಪೌರ ಕಾರ್ಮಿಕರು ತ್ಯಾಗಜೀವಿಗಳು, ಕಾಯಕ ಯೋಗಿಗಳಿಗೆ ಕೆಲಸ ಮುಗಿಸಿ ವಿರಾಮ ವಿದ್ದ ಸಮಯದಲ್ಲಿ ವಿಶ್ರಮಿಸಲು 20 ಲಕ್ಷ ರು. ಅನುದಾನದಲ್ಲಿ ವಿಶ್ರಾಂತಿ ಗೃಹ ನಿರ್ಮಾಣವಾಗಲಿದ್ದು ಸ್ವಚ್ಛತ ಪೌರ ನೌಕರರಿಗೆ ಇದು ಸಹಾಯಕವಾಗಲಿದೆ ಎಂದರು.
ಪಟ್ಟಣದಲ್ಲಿ ಬೇಸಿಗೆ ಇರುವುದರಿಂದ ಭದ್ರಾ ನೀರು ಪೂರೈಕೆ ವ್ಯತ್ಯಾಸವಾದಲ್ಲಿ ಸಾರ್ವಜನಿಕರಿಗೆ ನೀರು ನೀಡಲು ಸಾಧ್ಯವಾಗುತ್ತಿಲ್ಲ. ಶಾಸಕರಾದ ತಾವು ಪ್ರತಿ ವಾರ್ಡಗಳಿಗೆ ಬೋರ್ ಕೊರೆಸಿದರೆ ಅನುಕೂಲವಾಗುತ್ತದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ಬಿ.ಕೆ.ಶಶಿಧರ್, ರಾಜು, ರವಿಕುಮಾರ್, ಬಿ.ಆರ್.ಮೋಹನ್ ಕುಮಾರ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಆಸಂದಿ ಕಲ್ಲೇಶ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಗುತ್ತಿಗೆದಾರ ಗಿರೀಶ್, ಆಶ್ರಯ ಸಮಿತಿ ಸದಸ್ಯ ಮುಬಾರಕ್, ವಿನಾಯಕ್ ಮತ್ತಿತರರು ಇದ್ದರು.