ಕನ್ನಡಪ್ರಭ ವಾರ್ತೆ ಉಡುಪಿ
ರಂಗಚಟುವಟಿಕೆಗೆ ಬಳಸುವ ಪರಿಕರಗಳನ್ನು ಸಂರಕ್ಷಿಸಲು, ನಿರ್ವಹಿಸಲು ಕಲಾಸಂಘಟನೆಗಳಿಗೆ ಸ್ವಂತ ಜಾಗ ಇರುವುದು ಅವಶ್ಯಕ ಎಂದು ಕಲ್ಮಾಡಿ ಬ್ರಹ್ಮಬೈದೇರುಗಳ ಗರೋಡಿ ಅಧ್ಯಕ್ಷ ಶಶಿಧರ ಎಂ. ಅಮೀನ್ ಪ್ರತಿಪಾದಿಸಿದರು.ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬ ಆರನೇ ದಿನ ಶುಕ್ರವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸುಮನಸಾ ಸಂಸ್ಥೆ ಕೂಡ ದಶಕದ ಹಿಂದಿನಿಂದ ಸ್ವಂತ ಜಾಗಕ್ಕಾಗಿ ಪ್ರಯತ್ನ ಪಡುತ್ತಾ ಬಂದಿತ್ತು. ಇನ್ನೆರಡು ವರ್ಷಗಳಲ್ಲಿ ಬೆಳ್ಳಿಹಬ್ಬ ಆಚರಿಸುವ ಹೊತ್ತಿಗೆ ಸಂಸ್ಥೆ ಸ್ವಂತ ಜಾಗದಲ್ಲಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ, ಸರ್ಕಾರ ಬದಲಾಗುವುದು ಸಹಜ. ಕಲಾವಿದನಲ್ಲಿ ಇರುವ ಕಲೆ ಬದಲಾಗುವುದಿಲ್ಲ. ಎಲೆಮರೆ ಕಾಯಿಯಂತಿರುವ ಕಲಾವಿದರನ್ನುಗುರುತಿಸಿ ಗೌರವಿಸಬೇಕು. ಲಾಬಿ ಮಾಡುವವರಿಗೆ, ಹಣ ನೀಡುವವರಿಗೆ ಪ್ರಶಸ್ತಿ ಬರುವುದೇ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಅಜಿತ್ ಅಂಬಲಪಾಡಿ ಅವರನ್ನು ರಂಗಸನ್ಮಾನ ನೀಡಿ ಗೌರವಿಸಲಾಯಿತು. ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ನಾರಾಯಣ ಬಲ್ಲಾಳ್, ಮಲ್ಪೆ ಉದ್ಯಮಿ ಹರೀಶ್ ಶ್ರೀಯಾನ್, ಉಪ್ಪೂರು ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ರಾಜು ಪೂಜಾರಿ, ಕೊಡವೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ರಾಜ ಶೇರಿಗಾರ್, ತಾಂಗದಗಡಿ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಮನೋಜ್ ಕುಮಾರ್, ಗರಡಿಮಜಲು ದುರ್ಗಾಪರಮೇಶ್ವರಿ ಮಾರಿಯಮ್ಮ ಸನ್ನಿಧಿ ಅಧ್ಯಕ್ಷ ದಯಾನಂದ ಪೂಜಾರಿ, ಸುಮನಸಾ ಕೊಡವೂರು ಸಂಚಾಲಕ ಭಾಸ್ಕರ ಪಾಲನ್ ಇದ್ದರು.
ವಿನಯ್ ಕಲ್ಮಾಡಿ ಸ್ವಾಗತಿಸಿದರು. ಅಂಬಿಕಾ ವಂದಿಸಿದರು. ಮುರುಗೇಶ್ ಮತ್ತು ಸೌಭಾಗ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮನಸಾ ಕಲಾವಿದರಿಂದ ‘ವಿದ್ಯುನ್ಮತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು.