ಕನ್ನಡಪ್ರಭ ವಾರ್ತೆ ಕಲಬುರಗಿ
ವಿಶಾಲ ಮೈಸೂರು ರಾಜ್ಯದಲ್ಲಿ ಸೇರಿದ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶ ಇಡೀ ರಾಜ್ಯದಲ್ಲಿ ಸರ್ಕಾರಿ ಸೇವೆಗಳಲ್ಲಿ 1956ರಿಂದ 1987ರ ವರೆಗೆ ಸರ್ಕಾರದ ಆಯಾ ಇಲಾಖೆಗಳಲ್ಲಿ ಶೇ.18ರಷ್ಷು ಇರಬೇಕಾದ ನಮ್ಮ ಪ್ರತಿನಿಧಿತ್ವ ಕೇವಲ ಶೇ.4ರಷ್ಷು ಮಾತ್ರ ಮತ್ತು ವಿಧಾನ ಮಂಡಲದ ಕಚೇರಿಗಳಲ್ಲಿ ಕೇವಲ ಶೇ1.5ರಷ್ಟು ಮಾತ್ರ ಇತ್ತು. ಆಗ ಬೆಂಗಳೂರಿನ ಕೆಲವು ಕಲ್ಯಾಣ ಕರ್ನಾಟಕ ವಿರೋಧಿ ಬುದ್ಧಿಜೀವಿಗಳಿಗೆ ನಮ್ಮ ಬಗ್ಗೆ ಕನಿಷ್ಠ ಕಾಳಜಿ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
2013ರ ವರೆಗೂ ರಾಜ್ಯದ ಒಟ್ಟು ಸರ್ಕಾರಿ ನೌಕರಿಗಳಲ್ಲಿ ಶೇ.19ರಷ್ಟು ಇರಬೇಕಾದ ನಮ್ಮ ಪಾಲು ಕೇವಲ ಶೇ.9ರಷ್ಷು ಇದ್ದು, ಈಗ ಸಂವಿಧಾನದ ವಿಶೇಷ ಸ್ಥಾನಮಾನ ಪಡೆದ ನಂತರವು ಸಹ ನಮ್ಮ ಪ್ರದೇಶದ ಜನಸಂಖ್ಯೆಗೆ ಅನುಗುಣವಾಗಿ ಇನ್ನು ನಮ್ಮ ಹಕ್ಕಿನ ಪಾಲು ನಾವು ಪಡೆದಿಲ್ಲ ಇಷ್ಟಾದರೂ ಬೆಂಗಳೂರಿನ ಕಲ್ಯಾಣ ವಿರೋಧಿ ಕೆಲವು ಬುದ್ಧಿಜೀವಿಗಳು ವಿಶೇಷ ಸ್ಥಾನಮಾನದ ಬಗ್ಗೆ ಹೊಟ್ಟೆಕಿಚ್ಚಿನ ದೃಷ್ಟಿಯಿಂದ ನೋಡುವುದು ಯಾವ ನ್ಯಾಯ?ಕರ್ನಾಟಕದ ಸಮಸ್ತ ಕನ್ನಡಿಗರೂ ಸಹೋದರರಂತೆ ಎಂದು ಹಿತವಚನ ನೀಡುವ ಅಭಿವೃದ್ಧಿ ವಿರೋಧಿ ಬುದ್ಧಿಜೀವಿಗಳು ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಆಶಾಕಿರಣವಾದ ಸಂವಿಧಾನದ 371ನೇ ಜೆ ಕಲಂ ತಿದ್ದುಪಡಿಯಿಂದ ಕಲ್ಯಾಣದ ಅಭ್ಯರ್ಥಿಗಳೆ ರಾಜ್ಯದ ಬಹುಪಾಲು ಹುದ್ದೆಗಳು ಕಬಳಿಸುತ್ತಿದ್ದಾರೆ ಇದರಿಂದ ರಾಜ್ಯದ ಇಪ್ಪತ್ನಾಲ್ಕು ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ರಾಜ್ಯದ ಜನಮಾನಸದಲ್ಲಿ ತಪ್ಪು ಸಂದೇಶ ನೀಡುತ್ತಿರುವುದು ನೋಡಿದರೆ ಇವರಿಗೆ ಅಖಂಡ ಕರ್ನಾಟಕದ ಬಗ್ಗೆ ಮತ್ತು ಪ್ರಾದೇಶಿಕ ಅಸಮಾನತೆಯ ನಿವಾರಣೆ ಬಗ್ಗೆ ಕಿಂಚಿತ್ತವಾದರು ಅಭಿಮಾನ ಇಲ್ಲದಿರುವುದು ಎದ್ದು ಕಾಣುತ್ತಿದೆ.
ಇಂತಹ ಕೀಳು ಮಟ್ಟದ ಬುದ್ಧಿಜೀವಿಗಳ ರಾಜ್ಯ ಒಡೆಯುವ ಕ್ಷುಲ್ಲಕ ನೀತಿಯ ಬಗ್ಗೆ ಕಲ್ಯಾಣ ಕರ್ನಾಟಕದ ಜನಮಾನಸ ಸಹಿಸುವದಿಲ್ಲ ಈ ಬಗ್ಗೆ ಗಂಭೀರವಾಗಿ ಪರಿಗಣಿಸುವದಲ್ಲದೆ ನಮ್ಮ ಪ್ರದೇಶದ ಅಭಿವೃದ್ಧಿಯ ಹಾಗೂ ನಮ್ಮ ಹಕ್ಕಿನ ಸಂವಿಧಾನದ 371ನೇ ಜೆ ಕಲಂ ವಿಶೇಷ ಸ್ಥಾನಮಾನದ ಬಗ್ಗೆ ಕೆಣಕಿದರೆ ನಾವು ಸುಮ್ಮನೆ ಕೊಡುವವರಲ್ಲ ಎಂದು ದಸ್ತಿ ಎಚ್ಚರಿಕೆ ನೀಡಿದ್ದಾರೆ.