ಚಿತ್ರದುರ್ಗ: ಇಂದಿನ ತಂತ್ರಜ್ಞಾನ ಯುಗದಲ್ಲಿ ಆನ್‍ಲೈನ್ ಮೂಲಕ ಗ್ರಾಹಕರಿಗೆ ವಂಚನೆಯಾಗುತ್ತಿದೆ. ಇದೇ ನಿಟ್ಟಿನಲ್ಲಿ ಗ್ರಾಹಕರಿಗೆ ಉಂಟಾಗುವ ಮೋಸ ಹಾಗೂ ಶೋಷಣೆ ತಪ್ಪಿಸಲು ಕೃತಕ ಬುದ್ಧಿಮತ್ತೆ ಸಹಾಯಕವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ.ಗೀತಾ ಅಭಿಪ್ರಾಯಪಟ್ಟರು.
ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ ಮಾತನಾಡಿ, ಸಣ್ಣ ಪುಟ್ಟ ವಸ್ತುಗಳು, ತರಕಾರಿ ಖರೀದಿಸುವ ಸಮಯದಲ್ಲಿ ಚೌಕಾಸಿ ಮಾಡುತ್ತೇವೆ. ಆದರೆ ದೊಡ್ಡ ದೊಡ್ಡ ಉತ್ಪನ್ನಗಳ ಖರೀದಿಸುವಾಗ ಮೋಸ ಹೋಗುತ್ತೇವೆ. ಇತ್ತೀಚೆಗೆ ಸೈಬರ್ ವಂಚನೆಗಳು ಹೆಚ್ಚಾಗುತ್ತಿವೆ. ಆನ್‍ಲೈನ್ ಮೂಲಕ ವಸ್ತುಗಳನ್ನು ಖರೀದಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ದುಡಿದು ಗಳಿಸುವ ಪ್ರತಿಯೊಂದು ರುಪಾಯಿಗೂ ಬೆಲೆಯಿದೆ. ವಸ್ತುಗಳನ್ನು ಖರೀದಿಸಿ ಮೊಸ ಹೋದರೆ ಶ್ರಮ ವ್ಯರ್ಥವಾದಂತೆ. ಮೊಸಹೋದ ಗ್ರಾಹಕರಿಗೆ ನೆರವು ನೀಡಲು ಜಿಲ್ಲಾ ಹಂತದಲ್ಲಿ ಗ್ರಾಹರ ವೇದಿಕೆಗಳಿವೆ. ಕೊಂಡ ವಸ್ತುಗಳಿಗೆ ತಪ್ಪದೇ ಬಿಲ್ ಪಡೆಯಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ತಂತ್ರಜ್ಞಾನದ ಯುಗದಲ್ಲಿ ಯಾವುದೇ ವಸ್ತುವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು, ಕೊಂಡುಕೊಳ್ಳಬಹುದು. ಇ-ಕಾಮರ್ಸ್ ವಹಿವಾಟು ಹೆಚ್ಚಾಗಿದೆ. ಹಲವಾರು ಆನ್‍ಲೈನ್ ಪ್ಲಾಟ್ ಫಾರಂಗಳು ಆನ್‍ಲೈನ್ ಮೂಲಕ ಹಣ ಪಡೆದು ವಸ್ತುಗಳನ್ನು ಮನೆಬಾಗಿಲಿಗೆ ಮುಟ್ಟಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಬರಬಾರದು. ವಸ್ತುಗಳನ್ನು ಕೊಳ್ಳುವಾಗ ಉತ್ಪನ್ನದ ಗುಣಮಟ್ಟ ಪರೀಕ್ಷಿಸಿ ತಿಳಿದು ನಂತರ ವ್ಯವಹರಿಸಬೇಕು ಎಂದು ಹೇಳಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಗ್ರಾಹಕರ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು. ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂಧನ್ ಸ್ವಾಗತಿಸಿದರು. ಕಾನೂನು ಮಾಪನಾ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಂ.ಗುರುಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಎಸ್.ಕೆ ಮಲ್ಲಿಕಾರ್ಜುನ್, ಕಂದಾಯ ಇಲಾಖೆ ಶಿರಸ್ತೆದಾರ ವೀರಣ್ಣ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.