ಪರಿಹಾರ ನೀಡಲು ವಿಳಂಬ, ಹಾವೇರಿ ಎಸಿ ಕಚೇರಿ ಚರಾಸ್ತಿ ಜಪ್ತಿ

KannadaprabhaNewsNetwork |  
Published : Mar 20, 2024, 01:15 AM IST
19ಎಚ್‌ವಿಆರ್‌3- | Kannada Prabha

ಸಾರಾಂಶ

ನ್ಯಾಯಾಲಯದ ಆದೇಶವಿದ್ದರೂ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಕಾರಣಕ್ಕೆ ಇಲ್ಲಿಯ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣ ಸೇರಿದಂತೆ ಚರಾಸ್ತಿಯನ್ನು ನ್ಯಾಯಾಲಯದ ಆದೇಶದಂತೆ ಮಂಗಳವಾರ ಜಪ್ತಿ ಮಾಡಲಾಯಿತು.

ಹಾವೇರಿ: ನ್ಯಾಯಾಲಯದ ಆದೇಶವಿದ್ದರೂ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಕಾರಣಕ್ಕೆ ಇಲ್ಲಿಯ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣ ಸೇರಿದಂತೆ ಚರಾಸ್ತಿಯನ್ನು ನ್ಯಾಯಾಲಯದ ಆದೇಶದಂತೆ ಮಂಗಳವಾರ ಜಪ್ತಿ ಮಾಡಲಾಯಿತು. ಹಾವೇರಿಯ ಎಪಿಎಂಸಿ ಬಳಿಯಿಂದ ಗಣಜೂರು ರಸ್ತೆಗಾಗಿ ನಗರದ ಗಿರಿಜವ್ವ ಹೊಸಮನಿ ಕುಟುಂಬಕ್ಕೆ ಸೇರಿದ 7 ಗುಂಟೆ ಜಾಗವನ್ನು ಸ್ವಾಧೀನ ಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ 5.5 ಕೋಟಿ ರು. ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕೆ ಚರಾಸ್ತಿ ಜಪ್ತಿ ಮಾಡಲಾಯಿತು. ಮಾ. 2ರಂದು ಹಾವೇರಿಯ ಹೆಚ್ಚುವರಿ ಸಿವಿಲ್‌ ನ್ಯಾಯಾಲಯವು ಉಪವಿಭಾಗಾಧಿಕಾರಿ ಕಚೇರಿಯ ಚರಾಸ್ತಿಗಳನ್ನು ಜಪ್ತಿ ಮಾಡಲು ಆದೇಶ ನೀಡಿದ ಮೇರೆಗೆ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಕಚೇರಿಯ ಕಂಪ್ಯೂಟರ್‌, ಪೀಠೋಪಕರಣಗಳನ್ನು ವಶಕ್ಕೆ ಪಡೆದರು. ಕಚೇರಿಗೆ ಎಂದಿನಂತೆ ಬಂದಿದ್ದ ಸಿಬ್ಬಂದಿಯು ಜಪ್ತಿ ವಿಷಯ ಕೇಳಿದ ತಕ್ಷಣ ಕಂಗಾಲಾಗಿ, ಕಚೇರಿಯ ಹೊರಗಡೆ ಕುಳಿತರು. ಗಿರಿಜವ್ವ ಹೊಸಮನಿ ಕುಟುಂಬಸ್ಥರು ಸ್ವಾತಂತ್ರ್ಯ ಹೋರಾಟಗಾರ ಹೊಸಮನಿ ಸಿದ್ದಪ್ಪ ಅವರ ಸಂಬಂಧಿಗಳಾಗಿದ್ದಾರೆ. ಏನಿದು ಪ್ರಕರಣ: ಎಪಿಎಂಸಿ ಮತ್ತು ಗಣಜೂರು ರಸ್ತೆ ನಿರ್ಮಾಣಕ್ಕಾಗಿ 1967ರಲ್ಲಿ 7 ಗುಂಟೆ ಜಾಗವನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ 2006ರಲ್ಲಿ ಸರ್ಕಾರ ನೋಟಿಫಿಕೇಷನ್‌ ಹೊರಡಿಸಿತು. ಆಗ ಪರಿಹಾರ ಕೊಡಿಸುವಂತೆ ಗಿರಿಜವ್ವ ಹೊಸಮನಿ ಕುಟುಂಬದವರು 2006ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 2010ರಲ್ಲಿ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಗುಂಟೆಗೆ ರು.50 ಸಾವಿರದ ಜತೆಗೆ ನಷ್ಟ ಪರಿಹಾರ, ಹೆಚ್ಚುವರಿ ಮಾರುಕಟ್ಟೆ ಮೌಲ್ಯ ನೀಡಲು ಆದೇಶಿಸಿದ್ದರು.ನಂತರ, ಸರ್ಕಾರ 2014ರಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಪ್ರಕರಣದ ವಿಚಾರಣೆ ನಡೆದು, 2020ರಲ್ಲಿ ಧಾರಾವಾಡದ ಹೈಕೋರ್ಟ್‌ ಪೀಠವು 1967ರಿಂದ 2004ರವರೆಗೆ ಶೇ 15ರ ಹೆಚ್ಚುವರಿ ಬಡ್ಡಿ ಮತ್ತು ನಷ್ಟ ಪರಿಹಾರದ ಹಣ ತುಂಬಿಕೊಡುವಂತೆ ಆದೇಶಿಸುವ ಮೂಲಕ ಕೆಳಗಿನ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಿತು. ಸರ್ಕಾರ ಪರಿಹಾರ ಕೊಡಲು ವಿಳಂಬವಾದ ಹಿನ್ನೆಲೆಯಲ್ಲಿ 2024ರ ಫೆ.7ರಂದು ಹೈಕೋರ್ಟ್‌ ಪೀಠ ಒಟ್ಟು ರು.5.05 ಕೋಟಿ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿತು. ಹೈಕೋರ್ಟ್‌ ಆದೇಶವಿದ್ದರೂ, ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ಭೂಸ್ವಾಧೀನ ಅಧಿಕಾರಿಯೂ ಆದ ಉಪವಿಭಾಗಾಧಿಕಾರಿ ಕಚೇರಿಯ ಚರಾಸ್ತಿ ಜಪ್ತಿಗೆ ಹಾವೇರಿಯ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಆದೇಶ ಹೊರಡಿಸಿತು. ನ್ಯಾಯಾಲಯದ ಆದೇಶದ ಪ್ರಕಾರ ಪರಿಹಾರದ ಪೂರ್ಣ ಹಣ ಭೂಮಿ ಕಳೆದುಕೊಂಡ ಗಿರಿಜವ್ವ ಹೊಸಮನಿ ಕುಟುಂಬಕ್ಕೆ ಸಿಗದ ಕಾರಣ, ಜಪ್ತಿ ಪ್ರಕ್ರಿಯೆ ಕೈಗೊಂಡಿದ್ದೇವೆ ಎಂದು ವಕೀಲ ಅಶೋಕ ನೀರಲಗಿ ತಿಳಿಸಿದ್ದಾರೆ. ಪರಿಹಾರದ ಹಣ ಬಿಡುಗಡೆಗಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಹೆಚ್ಚುವರಿ ಕಾಲಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹೇಳಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌