ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ: ಡಾ. ಇಂದ್ರಜಿತ್ ಭಟ್ಟಾಚಾರ್ಯ

KannadaprabhaNewsNetwork | Published : Nov 10, 2024 1:39 AM

ಸಾರಾಂಶ

ಕೆಎಂಸಿಯ ಗ್ರೀನ್ಸ್‌ನಲ್ಲಿ ಮಾಹೆಯ 32ನೇ ಘಟಿಕೋತ್ಸವ ಸಮಾರಂಭ ನಡೆಯಿತು. ನವದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರೊಬೊಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ನೀರಾ) ಮಹಾನಿರ್ದೇಶಕ ಡಾ. ಇಂದ್ರಜಿತ್ ಭಟ್ಟಾಚಾರ್ಯ ಭಾಗವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ, ಮಣಿಪಾಲ

ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸಿ) ಯಾವುದೇ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ. ಆದರೆ ಉತ್ಪಾದಕತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಬೇಕಾಗಿದೆ. ಆದಾಗ್ಯೂ ಕೃತಕ ಬುದ್ಧಿಮತ್ತೆಯನ್ನು ಅತ್ಯಂತ ಜವಾಬ್ದಾರಿಯಿಂದ ಬಳಸಿಕೊಳ್ಳುವುದು ಅತ್ಯಗತ್ಯ ಎಂದು ನವದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರೊಬೊಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ನೀರಾ) ಮಹಾನಿರ್ದೇಶಕ ಡಾ. ಇಂದ್ರಜಿತ್ ಭಟ್ಟಾಚಾರ್ಯ ಹೇಳಿದರು.ಅವರು ಶನಿವಾರ ಇಲ್ಲಿನ ಕೆಎಂಸಿಯ ಗ್ರೀನ್ಸ್‌ನಲ್ಲಿ ಮಾಹೆಯ 32ನೇ ಘಟಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಉತ್ಪಾದಕಕ ಕೃತಕ ಬುದ್ಧಿಮತ್ತೆ (ಜೆಎನರೇಟಿವ್ ಎಐ)ಯು ಹೊಸ ಭರವಸೆಯನ್ನು ಮೂಡಿಸುತ್ತಿದೆ. ಇದು ಡೇಟಾವನ್ನು ಸಂಶ್ಲೇಷಿಸುವ ಮತ್ತು ವಿಶ್ಲೇಷಿಸುವ ದಕ್ಷತೆಯನ್ನು ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ನಿಖರತೆಯನ್ನು ಹೆಚ್ಚಿಸುತ್ತದೆ. ಬ್ರೈನ್‌ಸೈಟ್ ಕೃತಕ ಬುದ್ಧಿಮತ್ತೆಯು ಅನಾರೋಗ್ಯಕ್ಕೆ ಕಾರಣವಾಗುವ ಗೆಡ್ಡೆಗಳು ಮತ್ತು ಬುದ್ಧಿಮಾಂದ್ಯತೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದವರು ಹೇಳಿದರು.ಪ್ರಧಾನಿ ನರೇಂದ್ರ ಮೋದಿ ಅವರು, ಕೃತಕ ಬುದ್ದಿಮತ್ತೆಯು ಮಾನವೀಯತೆಯ ಒಳಿತನ್ನು ಮಾಡುತ್ತವೆ ಎಂಬುದನ್ನು ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೃತಕ ಬುದ್ದಿಮತ್ತೇಯನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕಾಗಿದೆ. ಈ ರೀತಿ 2030ರ ವೇಳೆಗೆ ಜಾಗತಿಕ ಆರ್ಥಿಕತೆಗೆ 15 ಟ್ರಿಲಿಯನ್ ಡಾಲರ್ ಸೇರಿಸಲು ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗಲಿದೆ ಎಂದವರು ಅಭಿಪ್ರಾಯಪಟ್ಟರು. ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಈ ಘಟಿಕೋತ್ಸವದಲ್ಲಿ ಹೊರಗೆ ಬರುವ ಪ್ರತಿ ಪದವೀಧರರ ಮುಂದೆ ಅಂತ್ಯವಿಲ್ಲದ ಸಾಧ್ಯತೆಗಳಿವೆ. ಬದಲಾವಣೆಯನ್ನು ತರವುದು, ಹೊಸತನವನ್ನು ಹೆಚ್ಚಿಸುವ ಮತ್ತು ಸಮಾಜಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಹೊಣೆ ಅವರ ಮೇಲಿದೆ ಎಂದರು.

ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ಮಾತನಾಡಿ, ನಮ್ಮ ಪದವೀಧರರು ತಮ್ಮ ವೃತ್ತಿಪರ ಪ್ರಯಾಣದಲ್ಲಿ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡಲು ಸಿದ್ಧರಾಗಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ. ಜಗತ್ತನ್ನು ಧನಾತ್ಮಕವಾಗಿ ಆವಿಷ್ಕರಿಸುವ, ಪ್ರೇರೇಪಿಸುವ ಮತ್ತು ಪ್ರಭಾವ ಬೀರುವ ಭವಿಷ್ಯದ ನಾಯಕರನ್ನು ಪೋಷಿಸಲು ಮಾಹೆ ಸಮರ್ಪಿತವಾಗಿದೆ ಎಂದರು.ಮಾಹೆಯ ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ ಪಿ ವೇದಿಕೆಯಲ್ಲಿದ್ದರು. ಸಹಉಪಕುಲಪತಿ ಡಾ. ನಾರಾಯಣ ಸಭಾಹಿತ್ ಗಣ್ಯರನ್ನು ಸ್ವಾಗತಿಸಿದರು. ಎಂಕಾಡ್ಸ್‌ನ ಸಹಾಯಕ ಪ್ರಾಧ್ಯಾಪಕ ಡಾ. ಆನಂದ್ ದೀಪ್ ಶುಕ್ಲಾ ಕಾರ್ಯಕ್ರಮ ನಿರ್ವಹಿಸಿದರು. ಎಂಐಸಿ ನಿರ್ದೇಶಕಿ ಡಾ.ಪದ್ಮಾರಾಣಿ ವಂದಿಸಿದರು.------------

ಮೂವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಇದೇ ಸಂದರ್ಭದಲ್ಲಿ ಮಾಲೆಕ್ಯುಲರ್ ಬಯಾಲಜಿಯಲ್ಲಿ ಸಿಯೋನಾ ರೆಬೆಲ್ಲೊ, ಎಂಐಸಿಯಿಂದ ಬಿಎ ಮೀಡಿಯಾ ಮತ್ತು ಕಮ್ಯುನಿಕೇಶನ್‌ನಲ್ಲಿ ಸಮರಗಿ ಪಾತ್ರ, ಪಿಎಸ್‌ಪಿಎಚ್‌ ಎಂಎಸ್ಸಿಯಲ್ಲಿ ಜೀವಿತಾ ಕೆ.ಎಂ. ಅವರಿಗೆ ತಮ್ಮ ಅಸಮಾನ್ಯ ಸಾಧನೆಗಳಿಗಾಗಿ ಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ಚಿನ್ನದ ಪದಕಗಳನ್ನು ನೀಡಿ ಅಭಿನಂದಿಸಲಾಯಿತು.

Share this article