ವಿವಿಧ ಸಂಸ್ಥೆಗಳಿಂದ ಮೂರು ದಿನ ಆರೋಗ್ಯ ಶಿಬಿರ
ಅನೇಕ ಕಡೆ ಆರೋಗ್ಯ ಶಿಬಿರಗಳು ನಡೆಯುತ್ತಲೇ ಇರುತ್ತವೆ. ಆದರೆ ಕೃತಕ ಕೈಕಾಲು ಜೋಡಣಾ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಕೆ.ಆರ್.ಪುರಂ ಬಳಿ ಇರುವ ಸಂಜೀವಿನಿ ಆಸ್ಪತ್ರೆ ಆವರಣದಲ್ಲಿ ಮೈಕ್ರೋ ಲ್ಯಾಬ್ಸ್ ಪ್ರಾಯೋಜಕತ್ವದಲ್ಲಿ ರೋಟರಿ ಕ್ಲಬ್ ಹಾಸನ ಹೊಯ್ಸಳ, ರೋಟರಿ ಕ್ಲಬ್ ಹಾಸನ ಟೈಗರ್, ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಶ್ರೀ ಭಗವಾನ್ ಮಹಾವೀರ್ ವಿಕಲಾಂಗ ಸಹಾಯಕ ಸಮಿತಿ, ಜೈಪುರ್ ಸಹರಾ ಗ್ರೂಪ್ ಆಫ್ ಇಂಡಸ್ಟ್ರೀಸ್, ಇನ್ ವ್ಹೀಲ್ ಕ್ಲಬ್ ಆಫ್ ಹಾಸನ ಗೋಲ್ಡ್, ಯೂತ್ ಹ್ಯಾಂಡ್ ಫೌಂಡೇಶನ್, ಕನ್ನಡ ರಕ್ಷಣಾ ವೇದಿಕೆ, ಭಾರತ ಸೇವಾ ದಳ ಜಂಟಿಯಾಗಿ ಹಮ್ಮಿಕೊಂಡ ಜೂ.೨೩ ರಿಂದ 25ರ ವರೆಗಿನ ಮೂರು ದಿನಗಳ ಉಚಿತ ಕೃತಕ ಕಾಲು ಜೋಡಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.‘ಆರೋಗ್ಯ ತಪಾಸಣೆಗೆ ಆಗಾಗ್ಗೆ ಅಲ್ಲಲ್ಲಿ ಶಿಬಿರಗಳು ನಡೆಯುತ್ತಿರುತ್ತದೆ. ಆದರೆ ಕೃತಕ ಕಾಲು ಜೋಡಣೆ ಮಾಡುವ ಶಿಬಿರ ಎಂದರೆ ಪುಣ್ಯದ ಕಾರ್ಯಕ್ರಮ. ೨೦೨೩ರಲ್ಲೂ ಕೂಡ ರೋಟರಿ ಕ್ಲಬ್ ಹಾಸನ ಹೊಯ್ಸಳ ಮಾಡಿದ ಕಾರ್ಯಕ್ರಮದಲ್ಲೂ ಕೂಡ ನಾನು ಕೂಡ ಭಾಗವಹಿಸಿದ್ದು, ಮೂರು ದಿನ ಈ ಶಿಬಿರದಲ್ಲಿ ಮೊದಲ ದಿನವೇ ೧೭೦ ಜನರು ಬಂದಿದ್ದು, ಇನ್ನು ಎರಡು ದಿನ ಈ ಶಿಬಿರ ನಡೆಯಲಿದ್ದು, ಮೂರು ದಿನದಲ್ಲಿ ೩೫೦ಕ್ಕೂ ಹೆಚ್ಚು ಜನ ಫಲಾನುಭವಿಗಳೂ ಇದರ ಅನುಕೂಲ ಪಡೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.
ರೋಟರಿ ಕ್ಲಬ್ ಹಾಸನ ಹೊಯ್ಸಳ ಅಧ್ಯಕ್ಷ ಎಂ.ಡಿ. ಕುಮಾರ್ ಮತ್ತು ಶ್ರೀ ಭಗವಾನ್ ಮಹಾವೀರ ವಿಕಲಾಂಗ ಸಹಾಯಕ ಸಮಿತಿಯ ಅನಿಲ್ ಸುರಾನಾ ಮಾಧ್ಯಮದೊಂದಿಗೆ ಮಾತನಾಡಿ, ‘ನಮ್ಮ ಸಂಸ್ಥೆ ಕಳೆದ ೫೦ ವರ್ಷಗಳಿಂದಲೂ ೧೮ ದೇಶಗಳಲ್ಲಿ ಈ ಉಚಿತ ಕೆಲಸ ಮಾಡಲಾಗುತ್ತಿದೆ. ಮೈಕ್ರೋ ಲ್ಯಾಬ್ಸ್, ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಉಚಿತವಾಗಿ ಕೃತಕ ಕೈಕಾಲು ಜೋಡಣೆ ಮಾಡಲಾಗುತ್ತಿದೆ’ ಎಂದರು.