ಕಲಾವಿದರ ಸೃಷ್ಟಿ ಮನಸ್ಸನ್ನು ಹಗುರಗೊಳಿಸಿದೆ: ಗುರುದತ್‌ ಹೆಗಡೆ

KannadaprabhaNewsNetwork | Published : Oct 9, 2024 1:46 AM

ಸಾರಾಂಶ

ಶಿವಮೊಗ್ಗದಲ್ಲಿ ನಡೆದ ಕಲಾ ದಸರಾ ಕಾರ್ಯಕ್ರಮದಲ್ಲಿ ಕಲಾವಿದರು ರಚಿಸಿದ ಕಲಾಕೃತಿಗಳನ್ನು ಜಿಲ್ಲಾಧಿಕಾರಿ ಗುರುದತ್‌ ಹೆಗಡೆ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಒತ್ತಡದಿಂದ ಹೊರ ಬರಲು, ಮನಸ್ಸು ಹಗುರಗೊಳ್ಳಲು ಕಲಾ ದಸರಾದಂತಹ ಕಾರ್ಯಕ್ರಮ ಮತ್ತು ಇಲ್ಲಿ ಪ್ರದರ್ಶನಗೊಂಡ ಪ್ರಾಕೃತಿಕ ಚಿತ್ರಗಳು ಕಾರಣವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್‌ ಹೆಗಡೆ ಹೇಳಿದರು.

ನಗರದಲ್ಲಿ ನಡೆಯುತ್ತಿರುವ ದಸರಾ ಕಾರ್ಯಕ್ರಮದ 6ನೇ ದಿನವಾದ ಮಂಗಳವಾರ ಶಿವಪ್ಪ ನಾಯಕ ಅರಮನೆಯ ಆವರಣದಲ್ಲಿ ನಡೆದ ‘ಕಲಾದಸರಾ’ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿಯೇ 2ನೇ ಅತೀ ದೊಡ್ಡ ಸಂಭ್ರಮ ಮತ್ತು ಸಡಗರದಿಂದ ಅರ್ಥಪೂರ್ಣ ಆಚರಣೆಗೆ ಶಿವಮೊಗ್ಗ ದಸರಾ ಹೆಸರಾಗಿದೆ. ಕಲಾ ದಸರಾ ಮೂಲಕ ಚಿತ್ರಕಲೆ ಮತ್ತು ಛಾಯಾ ಚಿತ್ರ ಪ್ರದರ್ಶನ ಮನಸ್ಸಿಗೆ ಮುದ ನೀಡಿದೆ. ಜಿಲ್ಲೆಯ ಅಮೂಲ್ಯವಾದ ವನ್ಯ ಜೀವಿಗಳು, ಪ್ರಕೃತಿ ಸೌಂದರ್ಯ ಇಲ್ಲಿ ಚಿತ್ರಣವಾಗಿ ನಮ್ಮ ಮುಂದೆ ಅನಾವರಣಗೊಂಡಿದೆ. ಇದನ್ನು ಕಂಡಾಗ ಪ್ರಕೃತಿಯ ಜೊತೆಗೆ ಇರಬೇಕು ಎಂದು ಮನಸು ಹೇಳುತ್ತದೆ. ಪರಿಸರದ ಬಗ್ಗೆ ಜಾಗೃತಿ ಕೂಡ ಮೂಡತ್ತದೆ ಎಂದರು.

ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಮಾತನಾಡಿ, ಛಾಯಾ ಚಿತ್ರಗಳು ಮನುಷ್ಯನ ಮನಸ್ಸಿಗೆ ಹತ್ತಿರವಾದ ವಿಷಯವಾಗಿದ್ದು, ನಾನು ಕೂಡ ಒಬ್ಬ ಛಾಯಾಗ್ರಹಕನೆ. ಛಾಯಾಗ್ರಹಣಕ್ಕೆ ತಾಳ್ಮೆ, ಆಸಕ್ತಿ ಅತೀ ಅಗತ್ಯ ಎಂದು ಹೇಳಿದರು.

ಸಮಾರಂಭದಲ್ಲಿ 20ಕ್ಕೂ ಹೆಚ್ಚು ಕಲಾವಿದರಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸಲು ಕ್ಯಾನ್ವಾಸ್ ಮತ್ತು ಬಣ್ಣವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ಯೋಜನಾ ನಿರ್ದೇಶಕರಾದ ರಂಗ ಸ್ವಾಮಿ, ಆಯುಕ್ತರಾದ ಕವಿತಾ ಯೋಗಪ್ಪನವರ್, ಕಲಾವಿದರ ಹಾಗೂ ಛಾಯಾ ಚಿತ್ರಗ್ರಾಹಕರ ಪರವಾಗಿ ಡಾ.ಪ್ರಶಾಂತ್ ಪೈ, ಉಪ ಆಯುಕ್ತ ತುಷಾರ್ ಹೊಸೂರು ಇದ್ದರು.|

25ಕ್ಕೂ ಹೆಚ್ಚು ಕಲಾವಿದರು ಭಾಗಿ

ಶಿವಮೊಗ್ಗ ನಗರದ ಶಿವಪ್ಪ ನಾಯಕ ಆರಮನೆಯಲ್ಲಿ ಕಲಾ ದಸರಾ ಅಂಗವಾಗಿ ನಡೆದ ಚಿತ್ರ ಕಲಾ ಪ್ರದರ್ಶನ ಮತ್ತು ಛಾಯಾ ಚಿತ್ರ ಪ್ರದರ್ಶನದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ 25ಕ್ಕೂ ಹೆಚ್ಚು ಕಲಾವಿದರು, ಸ್ಥಳದಲ್ಲಿಯೇ ವಿವಿಧ ಕಲಾ ಕೃತಿಗಳನ್ನು ರಚಿಸಿದರು. ಕಲಾವಿದರೊಬ್ಬರು ಕಲಾ ದಸರಾ ಉದ್ಘಾಟನೆಗೆ ಬಂದಿದ್ದ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರ ಭಾವಚಿತ್ರವನ್ನು ಸ್ಥಳದಲ್ಲಿಯೇ ರಚಿಸಿದರು.

Share this article