ದೊಡ್ಡಬಳ್ಳಾಪುರ: ಪೌರಾಣಿಕ ನಾಟಕದಲ್ಲಿ ಮನೋಜ್ಞ ಅಭಿನಯ ನೀಡುತ್ತಿದ್ದ ಕಲಾವಿದ, ಪ್ರೇಕ್ಷಕರ ಚಪ್ಪಾಳೆಯ ನಡುವೆಯೇ ದಿಢೀರನೇ ರಂಗ ಮಂಟಪದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಸಮೀಪದ ಯಲಹಂಕ ತಾಲೂಕಿನ ಸಾತನೂರು ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ದೊಡ್ಡಬಳ್ಳಾಪುರ: ಪೌರಾಣಿಕ ನಾಟಕದಲ್ಲಿ ಮನೋಜ್ಞ ಅಭಿನಯ ನೀಡುತ್ತಿದ್ದ ಕಲಾವಿದ, ಪ್ರೇಕ್ಷಕರ ಚಪ್ಪಾಳೆಯ ನಡುವೆಯೇ ದಿಢೀರನೇ ರಂಗ ಮಂಟಪದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಸಮೀಪದ ಯಲಹಂಕ ತಾಲೂಕಿನ ಸಾತನೂರು ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಅರದೇಶಹಳ್ಳಿಯ ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಎನ್.ಮುನಿಕೆಂಪಣ್ಣ ಮೃತಪಟ್ಟ ಹಿರಿಯ ಕಲಾವಿದರು.
ಗ್ರಾಮದಲ್ಲಿ ಶನಿವಾರ ರಾತ್ರಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ವೇಳೆ ಹಿರಿಯ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರೂ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದರು. ಹಿರಿಯ ಕಲಾವಿದ, ನಿವೃತ್ತ ಉಪನ್ಯಾಸಕ, ಸಾಹಿತಿ ಎನ್.ಮುನಿಕೆಂಪಣ್ಣ ಈ ನಾಟಕದಲ್ಲಿ ಶಕುನಿಯ ಪಾತ್ರ ನಿರ್ವಹಿಸಿದ್ದರು. ಶಕುನಿಯ ಪಾತ್ರಕ್ಕೆ ಜೀವತುಂಬಿ ಅಭಿನಯಿಸಿದ್ದ ಅವರ ಸಂಭಾಷಣೆ, ಕಂಚಿನ ಕಂಠಕ್ಕೆ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆ ಸುರಿಸಿದ್ದರು. ನಾಟಕ ಮುಂದುವರೆದಿತ್ತು. ಮಧ್ಯರಾತ್ರಿ 1.30. ಶಕುನಿಯ ಪಾತ್ರಧಾರಿ ಮುನಿಕೆಂಪಣ್ಣ ಸುದೀರ್ಘ ಸಂಭಾಷಣೆ ನಡುವೆ ಸ್ವಲ್ಪ ಬಳಲಿದಂತೆ ಕಂಡು ಬಂದರು. ವೇದಿಕೆಯ ಜಗುಲಿಯಲ್ಲಿ ಕುಳಿತುಕೊಳ್ಳುವ ಪ್ರಯತ್ನದಲ್ಲೇ ಕುಸಿದು ಬಿದ್ದ ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮುನಿಕೆಂಪಣ್ಣ, ಇತ್ತೀಚೆಗೆ ನಡೆದಿದ್ದ ದೇವನಹಳ್ಳಿ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಶನಿವಾರ ಸಂಜೆ ಅವರ ಹುಟ್ಟೂರಾದ ದೇವನಹಳ್ಳಿ ತಾಲೂಕಿನ ಅರದೇಶಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ಸಂತಾಪ:
ಮುನಿಕೆಂಪಣ್ಣ ಅವರ ನಿಧನಕ್ಕೆ ಬೆಂ.ಗ್ರಾ. ಜಿಲ್ಲಾ ಕಸಾಪ, ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು, ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
4ಕೆಡಿಬಿಪಿ3-
ಕುರುಕ್ಷೇತ್ರ ನಾಟಕದಲ್ಲಿ ಮುನಿಕೆಂಪಣ್ಣ ಅಭಿನಯದ ಕೊನೆಯ ದೃಶ್ಯ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.