ಪು4...ಲೀಡ್‌.... ಕಲಾವಿದರಿಗೆ ಬೇಕಿದೆ ಸಮಾಜ, ಸರ್ಕಾರದ ನೆರವು

KannadaprabhaNewsNetwork |  
Published : Feb 16, 2026, 03:00 AM IST
ಕಲಾವಿದರಿಗೆ ಸಮಾಜ, ಸರ್ಕಾರದ ನೆರವು ಬೇಕು : ಬೋರಲಿಂಗಯ್ಯ ಅಭಿಮತ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ) ಕನ್ನಡ ಸಾಹಿತ್ಯ ಲೋಕದಲ್ಲಿ ಜಾನಪದ ಸಾಹಿತ್ಯ ಪ್ರಕಾರಕ್ಕೆ ವಿಶಿಷ್ಟ ಸ್ಥಾನಮಾನವಿದೆ. ಹುಟ್ಟಿನಿಂದ ಸಾವಿನವರೆಗೆ ಜೀವನದ ಪ್ರತಿ ಹಂತದ ಆಚರಣೆಯಲ್ಲಿ ಜಾನಪದ ಸಾಕ್ಷಿಯಾಗುತ್ತದೆ. ಜಾನಪದ ಕಲಾವಿದರು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಅಧಿಕವಾಗಿದ್ದಾರೆ. ಕಲಾವಿದರಿಗೆ ಸಮಾಜ ಹಾಗೂ ಸರ್ಕಾರದ ನೆರವು ಅಗತ್ಯವಾಗಿ ಬೇಕಿದೆ ಎಂದು ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಕನ್ನಡ ಸಾಹಿತ್ಯ ಲೋಕದಲ್ಲಿ ಜಾನಪದ ಸಾಹಿತ್ಯ ಪ್ರಕಾರಕ್ಕೆ ವಿಶಿಷ್ಟ ಸ್ಥಾನಮಾನವಿದೆ. ಹುಟ್ಟಿನಿಂದ ಸಾವಿನವರೆಗೆ ಜೀವನದ ಪ್ರತಿ ಹಂತದ ಆಚರಣೆಯಲ್ಲಿ ಜಾನಪದ ಸಾಕ್ಷಿಯಾಗುತ್ತದೆ. ಜಾನಪದ ಕಲಾವಿದರು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಅಧಿಕವಾಗಿದ್ದಾರೆ. ಕಲಾವಿದರಿಗೆ ಸಮಾಜ ಹಾಗೂ ಸರ್ಕಾರದ ನೆರವು ಅಗತ್ಯವಾಗಿ ಬೇಕಿದೆ ಎಂದು ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ ಹೇಳಿದರು.

ತೇರದಾಳ ಪಟ್ಟಣದ ಶ್ರೀ ಅಲ್ಲಮಪ್ರಭು ಸಭಾಮಂಟಪದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಮತ್ತು ಜಿಲ್ಲಾ ಘಟಕ, ತೇರದಾಳ ತಾಲೂಕು ಘಟಕ, ತೇರದಾಳ ಕಸಾಪ ತಾಲೂಕು ಘಟಕ ಜಂಟಿಯಾಗಿ ಆಯೋಜಿಸಿದ್ದ ಬಾಗಲಕೋಟ ಜಿಲ್ಲಾ ದ್ವಿತೀಯ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ಹಾಗೂ ತೇರದಾಳ ತಾಲೂಕುಗಳಲ್ಲಿ ಜಾನಪದ ಕಲಾವಿದರ ಸಂಖ್ಯೆ ಅತೀ ಹೆಚ್ಚಿದೆ. ಜಾನಪದ ಜೀವನ ಕ್ರಮವಾಗಿದ್ದು, ಇಂದು ಯುವಕರು ಜಾನಪದ ಹೆಸರಲ್ಲಿ ಕೀಳು ಸಾಹಿತ್ಯದತ್ತ ವಾಲುತ್ತಿದ್ದಾರೆ ಎಂದು ವಿಷಾದಿಸಿದರು.ಅಂಥ ಯುವಜನತೆಯನ್ನು ಜಾನಪದ ಕಲಾ ಪ್ರಕಾರಗಳತ್ತ ಸೆಳೆಯಬೇಕು. ಸರ್ಕಾರ ಜಾನಪದ ಪರಿಷತ್‌ಗೆ ಅಗತ್ಯದಷ್ಟೂ ಅನುದಾನ ನೀಡುತ್ತಿಲ್ಲ. ಆದ್ದರಿಂದ ಯುವಕರನ್ನು ಮೂಲ ಜಾನಪದ ಕಲೆಗಳತ್ತ ಸೆಳೆಯಲು ಗ್ರಾಮ, ಹೋಬಳಿ ಮಟ್ಟದಲ್ಲಿ ಜಾನಪದ ಕಲೆಗಳ ಪರಿಚಯಾತ್ಮಕ ಮತ್ತು ಮಹತ್ತತೆ ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿಲ್ಲ. ಜಾನಪದ ಉಳಿಯಲು ಸಮಾಜ ಮತ್ತು ಸರ್ಕಾರ ನೆರವು ನೀಡಬೇಕು, ಕಲಾವಿದರಿಗೆ ಆರ್ಥಿಕ ಸಂಕಷ್ಟವಾಗದಂತೆ ಮತ್ತು ಕುಟುಂಬ ನಿರ್ವಹಣೆಯಾಗುವಂತೆ ಗಮನಿಸುವ ಹೊಣೆ ಹೊರಬೇಕಿದೆ ಎಂದರು.

ಜಾನಪದ ಪರಿಷತ್‌ ಅನ್ನು ಎಚ್.ಎಲ್.ನಾಗೇಗೌಡರು ಸ್ಥಾಪಿಸಿದ್ದು, ರಾಮನಗರ ಬಳಿಯ 15 ಎಕರೆ ಸಾಂಸ್ಕೃತಿಕ ಗ್ರಾಮದ ಜಾನಪದ ಲೋಕದಲ್ಲಿ ೧೫೦೦ ಗಂಟೆಗಳು ಕೇಳುವಷ್ಟು ಸಮಯ, ೨೫೦ ಗಂಟೆಗಳು ನೋಡುವಷ್ಟು ವಿಡಿಯೋ ಸಂಗ್ರಹಗಳಿವೆ. ಸಂಶೋಧನಾ ವಿದ್ಯಾರ್ಥಿಗಳು, ಆಸಕ್ತಿ ಇರುವವರು ಬಂದರೆ ಭಂಡಾರ ದೊರೆಯುತ್ತದೆ ಎಂದ ಅವರು, ಕಲಾವಿದರಿಗೆ ಸೂಕ್ತ ವೇತನ, ಮಾಸಾಶನ ದೊರೆಯುತ್ತಿಲ್ಲ. ಪ್ರೋತ್ಸಾಹದ ಕೊರತೆ ಕಾರಣ ಯುವಕರಿಗೆ ಜಾನಪದ ಕಲೆಗಳನ್ನು ಕಲಿಸುವಲ್ಲೂ ಅಡಚಣೆಯಿದೆ. ಕಲಾವಿದರ ಬದುಕು ಕಷ್ಟವೆಂದು ಯುವಕರು ಈ ಕ್ಷೇತ್ರದತ್ತ ಬರುತ್ತಿಲ್ಲ. ನಮ್ಮ ಸಾಂಸ್ಕೃತಿಕ ಪರಂಪರೆಯಾದ ಜಾನಪದ ಕಲೆ ನಶಿಸಬಾರದು ಎಂದು ಪರಿಷತ್ ಶ್ರಮಿಸುತ್ತಿದೆ ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ, ಜಾನಪದ ಕಲೆಗಳು ನಮ್ಮೆಲ್ಲರ ಜೀವನದ ಪ್ರತಿ ಘಟ್ಟದಲ್ಲೂ ಕಾಣಸಿಗುವಂತಿದ್ದು, ಇದೀಗ ಎಷ್ಟೇ ಆಧುನಿಕತೆ ಬೆಳೆದರೂ ನಮ್ಮ ಮೂಲ ಆಚರಣೆ ವಿಧಾನಗಳಲ್ಲಿ ಹಾಸುಹೊಕ್ಕಿರುವ ಜಾನಪದ ಕಿಂಚಿತ್ತಾದರೂ ಉಳಿದಿರುವುದು ನೆಮ್ಮದಿ ಮೂಡಿಸುತ್ತಿದೆ. ಜಾನಪದ ಹೆಸರಲ್ಲಿ ವಿಕೃತಿ ವಿಜೃಂಭಿಸುವುದನ್ನು ತಡೆಗಟ್ಟಿ ಮೂಲ ಮತ್ತು ಜ್ಞಾನದಾಯಿಕ ಜಾನಪದ ಕಲೆ ಪ್ರಕಾರಗಳು ಉಳಿಯುವಂತೆ ಎಲ್ಲರೂ ಸಂಕಲ್ಪಿತರಾಗಬೇಕು. ಸರ್ಕಾರ ಜಾನಪದ ಕಲಾಪ್ರಕಾರಗಳಲ್ಲಿ ಸೇವೆಯಲ್ಲಿರುವ ಕಲಾವಿದರಿಗೆ ಸೂಕ್ತ ಅವಕಾಶ ಕಲ್ಪಿಸಿ, ಅವರಿಗೆ ಆರ್ಥಿಕ ಸೌಲಭ್ಯ ಕಲ್ಪಿಸುವ ಮೂಲಕ ಹಾಗೂ ವೃದ್ಧಾಪ್ಯದಲ್ಲಿ ಮಾಸಾಶನ ಮೊತ್ತ ಹೆಚ್ಚಿಸಿ ಜಾನಪದ ಕ್ಷೇತ್ರದತ್ತ ಯುವವರ್ಗವನ್ನು ಸೆಳೆಯಲು ಯೋಜನೆ ರೂಪಿಸಬೇಕು. ಆರ್ಥಿಕ ಭದ್ರತೆ ಇಲ್ಲದಿದ್ದರೆ ಯಾವುದೇ ಕ್ಷೇತ್ರವಾದರು ನಶಿಸುವುದು ಖಂಡಿತ. ಆದರೂ ನಮ್ಮ ಕಲಾ ಪ್ರಕಾರಗಳು ನಮ್ಮ ಬದುಕಿನುದ್ದಕ್ಕೂ ನಡೆಯುವ ಧಾರ್ಮಿಕ ಆಚರಣೆಗಳು, ಶುಭ, ಅಶುಭ ಸಮಾರಂಭಗಳಲ್ಲಿ ಬಳಕೆಯಾಗುವ ಕಾರಣ ಇಂದಿಗೂ ಉಳಿದಿವೆ. ಕಲಾವಿದರಿಗೆ ಆರ್ಥಿಕ ಸಬಲತೆ ಮೂಡಿಸುವ ಮತ್ತು ಮನೆಗಳನ್ನು ನೀಡುವ ಮತ್ತು ಅವರ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸರ್ಕಾರ ತನ್ನದಾಯಿತ್ವ ನಿಭಾಯಿಸಬೇಕು ಎಂದರು.

ಸಮ್ಮೇಳನಾಧ್ಯಕ್ಷ ರಾಯಪ್ಪ ಕುಂಬಾರರನ್ನೊಳಗೊಂಡ ಮೆರವಣಿಗೆಯನ್ನು ಪುರಸಭಾ ಮಾಜಿ ಅಧ್ಯಕ್ಷೆ ಶಿಲ್ಪಾ ರೋಡಕರ, ಉಪಾಧ್ಯಕ್ಷೆ ನಸ್ರೀಮಬಾನು ನಗಾರ್ಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. 35 ತೆರೆದ ಎತ್ತಿನ ಬಂಡಿಗಳ ಮೂಲಕ ಕುಂಭ ಹೊತ್ತ ಮಹಿಳೆಯರು, ಕರಡಿಮಜಲು, ಸಂಬಾಳ, ಹಲಗೆ, ಶಹನಾಯಿ ವಾದನಗಳ ಹತ್ತಾರು ತಂಡಗಳು, ಜಾನಪದ ಹಾಡುಗಾರರು ಭುವನೇಶ್ವರಿ, ಅಲ್ಲಮಪ್ರಭುದೇವರ ಭಾವಚಿತ್ರಗಳೊಡನೆ ಹಲವಾರು ರೂಪಕಗಳೊಡನೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು.

ವೇದಿಕೆಯಲ್ಲಿ ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಹಿರೇಮಠದ ಗಂಗಾಧರ ದೇವರು ಸಾನ್ನಿಧ್ಯ ವಹಿಸಿದ್ದರು. ಎಂ.ಎಸ್.ಬದಾಮಿ, ಅಶೋಕ ಮಹಾಲಿಂಗಪುರ, ನೇಮಣ್ಣಾ ಸಾವಂತನವರ, ಪ್ರವೀಣ ನಾಡಗೌಡ, ಅಶೋಕ ಆಳಗೊಂಡ, ಭುಜಬಲಿ ಕೆಂಗಾಲಿ, ನಿಂಗಪ್ಪ ಮಾಲಗಾಂವಿ, ಪರಸಪ್ಪ ಮಾಸ್ತಿ, ಸಿದ್ದು ಉಪ್ಪಲದಿನ್ನಿ, ಬಸವರಾಜ ಬಾಳಿಕಾಯಿ, ಮ.ಕೃ.ಮೇಗಾಡಿ ಇದ್ದರು. ಯಲ್ಲಪ್ಪ ಇಮ್ಮಡೆನ್ನವರ ಪ್ರಾರ್ಥಿಸಿದರು. ದೀಕ್ಷಾ ಕೊಣ್ಣೂರ ಭರತನಾಟ್ಯ ಪ್ರದರ್ಶಿಸಿದರು. ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ ಸ್ವಾಗತಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತಾವಿಕ ಮಾತುಗಳಾಡಿದರು. ಶ್ರೀಶೈಲ ಬುರ್ಲಿ, ಎಂ.ಬಿ.ಮಾಳೇದ ನಿರೂಪಿಸಿದರು. ಪದ್ಮಸಾಗರ ನಾಗನೂರ ವಂದಿಸಿದರು.

ಸಮಾರಂಭದಲ್ಲಿ ಹಿರಿಯ ಕಲಾವಿದರಾದ ಮಲ್ಲಪ್ಪ ಗಣಿ, ಬಾಲಚಂದ್ರ ಪಟ್ಟಣಶೆಟ್ಟಿ, ದಾನಪ್ಪ ಆಸಂಗಿ, ರಾಜೇಸಾಬ ನಗಾರ್ಜಿ, ಬಸವರಾಜ ಪಟ್ಟಣಶೆಟ್ಟಿ ಸೇರಿದಂತೆ ಅನೇಕ ಕಲಾವಿದರು, ಗಾಯಕರು ಪಾಲ್ಗೊಂಡಿದ್ದರು.----------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ
ಸಾತ್ವಿಕ ಭಾವದಿಂದ ನಾಡು ಸಮೃದ್ಧಿ