ಕಲಾವಿದ ಪಾತ್ರಗಳಿಗೆ ಜೀವ ತುಂಬಬೇಕು: ಶರತ್‌ ಲೋಹಿತಾಶ್ವ

KannadaprabhaNewsNetwork |  
Published : May 28, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್    | Kannada Prabha

ಸಾರಾಂಶ

ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಮ್ಮೂರ ನೆಂಟರು ಮಾಲಿಕೆಯಲ್ಲಿ ಹಿರಿಯೂರಿನಲ್ಲಿ ನೆಂಟಸ್ತಿಕೆ ಮಾಡಿರುವ ಚಿತ್ರನಟ ಶರತ್ ಲೋಹಿತಾಶ್ವ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಯಾವುದೇ ಕಲಾವಿದ ಒಳ್ಳೆಯ ಮತ್ತು ಕೆಟ್ಟ ಪಾತ್ರಗಳನ್ನು ಮಾಡುವಾಗ ಆತನಿಗೆ ನಟನೆ ಮುಖ್ಯವಾಗಬೇಕು. ಪಾತ್ರಕ್ಕೆ ಜೀವ ತುಂಬುವುದರ ಕಡೆ ಗಮನ ಕೇಂದ್ಕೀಕರಿಸಬೇಕೆಂದು ಚಲನಚಿತ್ರ ನಟ ಶರತ್ ಲೋಹಿತಾಶ್ವ ಅಭಿಪ್ರಾಯ ಪಟ್ಟರು.

ನಗರದ ಪತ್ರಿಕಾ ಭವನದ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಗೆಳೆಯರ ಬಳಗ, ದುರ್ಗದ ಸಿರಿ ಕಲಾ ಸಂಘ ಹಾಗೂ ರೈತಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ನಮ್ಮೂರ ನೆಂಟರು ಎಂಬ ವಿಶೇಷ ಮಾಲಿಕೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಮನೆಯಲ್ಲಿನ ಕಲಾಭಿವ್ಯಕ್ತಿಯನ್ನು ನೋಡಿ ಕಲಿತವನು ನಾನು. ತಂದೆ ಲೋಹಿತಾಶ್ವರು ತಮ್ಮ ಮೇಲೆ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ. ಚಿಕ್ಕವರಿದ್ದಾಗ ಅವರ ರಂಗಭೂಮಿ ನಾಟಕಗಳನ್ನು ನೋಡಿ ಬೆಳೆದಿದ್ದೇನೆ ಎಂದರು.

ಆರಂಭದಲ್ಲಿ ಚಿತ್ರರಂಗದಲ್ಲಿ ಬೇರೂರಲು ಕಷ್ಟ ಪಟ್ಟಿದ್ದೇನೆ. ಎಷ್ಟೇ ದೊಡ್ಡ ಪಾತ್ರ ಮಾಡಿದರೂ ನಮ್ಮನ್ನು ಬೆಳೆಸುವವರು ಬೇರೆ ಬೇರೆ ಕಾರಣಗಳಿಗೆ ತುಳಿಯಲು ಶುರು ಮಾಡಿದ್ದರು. ಅಂತಹ ಸಮಯಗಳಲ್ಲಿ ನಮ್ಮ ತಂದೆಯವರು ತುಂಬುತ್ತಿದ್ದ ಆತ್ಮಸ್ಥೈರ್ಯ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ ಎಂದರು.

ನಾಡಿನ ನೆಲ, ಜಲ, ಭಾಷೆ ವಿಷಯಗಳ ಕುರಿತಾಗಿ ಸದಾ ಎಚ್ಚರದಲ್ಲಿರಬೇಕು. ಅದೇ ರೀತಿ ನಾವು ಹುಟ್ಟಿ ಬೆಳೆದ ಪರಿಸರದ ಬಗ್ಗೆಯೂ ಕಾಳಜಿ ಇರಬೇಕು. ಹಿರಿಯೂರು ಸಮೀಪದ ಹಳ್ಳಿಯಲ್ಲಿ ವಿವಾಹವಾಗಿದ್ದೇನೆ. ಆದರೆ ಇಲ್ಲಿಗೆ ಬಂದು ಇಂತಹ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಪುಣ್ಯ. ನಮ್ಮ ತಂದೆಯವರ ಒಡನಾಡಿಗಳು ನನ್ನನ್ನೂ ಕರೆಸಿ ಇಂತಹ ಹೊಸತನದ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಡಾ.ಹೇಮಂತ ರಾಜು ಮಾತನಾಡಿ, ಬಹುಭಾಷಾ ನಟನಾಗಿ ಹಲವು ಭಾಷೆಗಳಲ್ಲಿ ನಟನೆ ಮಾಡಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಶರತ್ ಲೋಹಿತಾಶ್ವ ಪ್ರತಿಭಾನ್ವಿತರು. ಮನುಷ್ಯನ ಸಾಂಸ್ಕೃತಿಕ ಅಭಿವ್ಯಕ್ತಿ ಸಮಾಜವನ್ನು ಶಾಂತವಾಗಿಡಲು ಸಹಕಾರಿಯಾಗಲಿದೆ. ಸಾಹಿತ್ಯ ಸಾಂಸ್ಕೃತಿಕವಾಗಿ ನಮ್ಮ ಸೇವೆಗಳು ಸದಾ ಕಾಲ ಉಳಿಯಲಿವೆ ಎಂದರು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್ ಮಂಜುನಾಥ್ ಮಾತನಾಡಿ, ಬಹುಭಾಷೆಗಳಲ್ಲಿ ಪ್ರಕಾಶ್ ರಾಜ್ ನಂತರ ಶರತ್ ಅವರ ಅಭಿನಯ ನೋಡುಗರನ್ನು ಮನಸೂರೆಗೊಳ್ಳುವಂತೆ ಮಾಡಿದೆ. ಕಂಚಿನ ಕಂಠದ ಧ್ವನಿ ಹೊಂದಿರುವ ಕನ್ನಡದ ಏಕೈಕ ನಟ ಇವರು. ಖಳನಟರ ಪಾತ್ರಗಳನ್ನು ಮಾಡುವವರನ್ನು ಸಮಾಜ ಖಳರನ್ನಾಗಿ ನೋಡಬಾರದು. ಪರದೆಯ ಮೇಲೆ ಖಳರಾಗಿ ನಟಿಸಿದವರು ನಿಜ ಜೀವನದಲ್ಲಿ ಇರುವುದೇ ಬೇರೆ ಎಂದರು.

ದಶಕಗಳ ಹಿಂದೆ ಜಿ.ಚಂದ್ರಪ್ಪ ದುರ್ಗದ ನಗರಸಭಾಧ್ಯಕ್ಷರಾದಾಗ ಎರಡು ಲಕ್ಷ ಮರ ಬೆಳೆಸಿದರು. ಇದೀಗ ನಾವು ಮಾತೆತ್ತಿದರೆ ಬರದ ನಾಡು ಎನ್ನುತ್ತೇವೆ. ಆದರೆ, ನೆಂಟಸ್ತಿಕ ಮಾಡಿಕೊಂಡಿರುವ ಇಂತಹ ಮಹನೀಯರ ಕರೆಸಿ ಈ ತರಹದ ವಿನೂತನ ಕಾರ್ಯಕ್ರಮ ಮುಂದುವರೆಯಬೇಕು ಎಂದರು.

ಜಿಲ್ಲಾ ಪತ್ರಕರ್ತರ ಜಿಲ್ಲಾಧ್ಯಕ್ಷ ವಿನಾಯಕ ತೋಡರನಾಳ್ ಮಾತನಾಡಿ, ಚಿತ್ರದುರ್ಗ ಅನೇಕ ಕಲಾವಿದರನ್ನು ಕರೆಸಿಕೊಂಡಿದೆ. ಸಾಕಷ್ಟು ಸಿನೆಮಾಗಳೂ ಈ ನೆಲದಲ್ಲಿ ಆಗಿವೆ. ನಮ್ಮೂರ ನೆಂಟರು ಅತ್ಯಂತ ವಿಶಿಷ್ಟ ಕಾರ್ಯಕ್ರಮವಾಗಿದ್ದು ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಈ ತರಹದ ವಾತಾವರಣ ಕಾಣಸಿಗದೆಂದರು.

ದುರ್ಗದ ಸಿರಿ ಕಲಾ ಸಂಘದ ಅಧ್ಯಕ್ಷ ಎನ್.ಆರ್.ಮಹಾಂತರೆಡ್ಡಿ ಮಾತನಾಡಿ, ಚಿತ್ರದುರ್ಗದ ನೆಲ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆದುಕೊಳ್ಳುತ್ತಿದೆ. ಐತಿಹಾಸಿಕ ಸಿನಿಮಾ ಹಾಗೂ ನಾಟಕಗಳಲ್ಲಿ ಶರತ್ ಲೋಹಿತಾಶ್ವ ಅಂತವರು ಅಭಿನಯಿಸಬೇಕು. ದುರ್ಗದ ಸಿರಿಯ ವಾರ್ಷಿಕ ಕಾರ್ಯಕ್ರಮದಲ್ಲಿ ಐತಿಹಾಸಿಕ ನಾಟಕ ಆಯೋಜಿಸುವ ಕುರಿತು ಆಲೋಚಿಸಲಾಗುವುದೆಂದರು.

ಆಶಯ ನುಡಿಗಳನ್ನಾಡಿದ ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಸಾಹಿತ್ಯ, ರಂಗಭೂಮಿ, ಇನ್ನಿತರೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹೆಸರು ಗಳಿಸಿರುವವರು ಚಿತ್ರದುರ್ಗ ಜಿಲ್ಲೆಯಲ್ಲಿ ನೆಂಟಸ್ಥಿಕೆ ಮಾಡಿರುವವರ ಕರೆಯೆಸಿ ಗೌರವಿಸಲಾಗುತ್ತಿದೆ. ಕಾರಣಾಂತರಗಳಿಂದ ಈ ಮಾಲಿಕೆ ಸ್ಥಗಿತಗೊಂಡಿತ್ತು. ಇದೀಗ ಪುನರ್ ಚಾಲನೆ ನೀಡಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ, ಮದಕರಿ ನಾಯಕನಂತಹ ಐತಿಹಾಸಿಕ ಪಾತ್ರವನ್ನು ಶರತ್ ಅವರೇ ಮಾಡಬೇಕು. ಇಂತಹ ಸಂದರ್ಭಕ್ಕೆ ನಾನು ಸಾಕ್ಷಿಯಾಗುತ್ತೇನೆ ಎಂದರು. ರೈತಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ ಇದ್ದರು. ರಾಜಶೇಖರ್ ಸ್ವಾಗತಿಸಿದರು. ಕೆಪಿಎಂ ಗಣೇಶಯ್ಯ ಪ್ರಾರ್ಥಿಸಿದರು. ಜಡೇಕುಂಟೆ ಮಂಜುನಾಥ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆ ಶಿಥಿಲ ಕೊಠಡಿಗಳ ಸಮಗ್ರ ಮಾಹಿತಿ ನೀಡಿ: ಬಿಇಒ
ಸ್ವಾಯತ್ತ ಸಂಸ್ಕೃತಿಯ ದಿಕ್ಕು ತಪ್ಪಿಸುವವರ ಬಗ್ಗೆ ಎಚ್ಚರವಿರಲಿ: ಪ್ರೊ.ಎಸ್. ನಟರಾಜ ಬೂದಾಳು