ವೈಭವಯುತವಾಗಿ ನಡೆದ ಆರೂಢ ಆರತಿ

KannadaprabhaNewsNetwork |  
Published : Dec 20, 2025, 02:15 AM IST
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠದಲ್ಲಿ ಶುಕ್ರವಾರ ಸಂಜೆ ಅಪಾರ ಭಕ್ತ ಸಮೂಹದ ಮಧ್ಯ ನಡೆದ ಆರೂಢ ಆರತಿ. | Kannada Prabha

ಸಾರಾಂಶ

ಉತ್ತರ ಕರ್ನಾಟಕ ಭಕ್ತರ ಆರಾಧ್ಯ ದೈವವಾಗಿರುವ ಇಲ್ಲಿನ ಶ್ರೀಸಿದ್ಧಾರೂಢಸ್ವಾಮಿ ಮಠದ ಆವರಣದಲ್ಲಿ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಮೊಟ್ಟ ಮೊದಲ ಬಾರಿಗೆ "ಗಂಗಾ ಆರತಿ " ಮಾದರಿಯಲ್ಲಿ "ಆರೂಢ ಆರತಿ " ಅದ್ಧೂರಿಯಾಗಿ ನೆರವೇರಿತು.

ಹುಬ್ಬಳ್ಳಿ:

ಉತ್ತರ ಕರ್ನಾಟಕ ಭಕ್ತರ ಆರಾಧ್ಯ ದೈವವಾಗಿರುವ ಇಲ್ಲಿನ ಶ್ರೀಸಿದ್ಧಾರೂಢಸ್ವಾಮಿ ಮಠದ ಆವರಣದಲ್ಲಿ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಮೊಟ್ಟ ಮೊದಲ ಬಾರಿಗೆ "ಗಂಗಾ ಆರತಿ " ಮಾದರಿಯಲ್ಲಿ "ಆರೂಢ ಆರತಿ " ಅದ್ಧೂರಿಯಾಗಿ ನೆರವೇರಿತು.

ಶ್ರೀಮಠದ ಮುಖ್ಯ ಆಡಳಿತಾಧಿಕಾರಿಯಾದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ "ಆರೂಢ ಆರತಿ "ಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಅಮಾವಾಸ್ಯೆ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಬೆಳಗ್ಗೆಯಿಂದಲೇ ಸಿದ್ಧಾರೂಢ ಸ್ವಾಮೀಜಿ ಹಾಗೂ ಗುರುನಾಥಾರೂಢ ಸ್ವಾಮೀಜಿಗೆ ವಿಶೇಷ ಪೂಜೆ-ಪುನಸ್ಕಾರ ನಡೆದವು. ಆರೂಢರ ಗದ್ದುಗೆಯಿಂದ ಹಿಡಿದು ಇಡೀ ಮಠವನ್ನು ಹೂವು, ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕರದಿಂದ ಸಿಂಗರಿಸಿದ್ದು ವಿಶೇಷವಾಗಿತ್ತು. ಅಲ್ಲದೇ ಶ್ರೀಮಠದ ಆವರಣದಲ್ಲಿರುವ ಪುಷ್ಕರಣಿಯನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಯಿತು. ವಿಶೇಷವಾಗಿ ಸಂಪ್ರದಾಯಿಕ ಉಡುಗೆ, ತೊಡಗೆಯಲ್ಲಿ ಆಗಮಿಸಿದ ಮಹಿಳೆಯರು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಆರೂಢ ಆರತಿಯನ್ನು ಕಣ್ತುಂಬಿಕೊಂಡರು. ಪೂಜೆಯ ಬಳಿಕ ಬಣ್ಣ-ಬಣ್ಣದ ಚಿತ್ತಾರಗಳ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ವೇಳೆ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಚನ್ನವೀರ ಮುಂಗುರವಾಡಿ, ಉಪಾಧ್ಯಕ್ಷ ವಿನಾಯಕ ಘೋಡಕೆ, ಗೌರವ ಕಾರ್ಯದರ್ಶಿ ರಮೇಶ ಬೆಳಗಾವಿ, ಧರ್ಮದರ್ಶಿಗಳಾದ ಬಸವರಾಜ ಕಲ್ಯಾಣಶೆಟ್ಟರ, ಬಾಳಕೃಷ್ಣ ಮೊಗಜಿಕೊಂಡಿ, ಶಾಮಾನಂದ ಪೂಜೇರಿ, ಗೀತಾ ಕಲಬುರ್ಗಿ, ಮಂಜುನಾಥ ಮುನವಳ್ಳಿ, ವೀರಪ್ಪ ಮಲ್ಲಾಪುರ ಸೇರಿದಂತೆ ಹಲವರಿದ್ದರು.

35 ನಿಮಿಷಗಳ ಕಾಲ ನಡೆದ ಆರೂಢ ಆರತಿ

ಶ್ರೀಮಠದಲ್ಲಿ ಮೊದಲ ಬಾರಿಗೆ ಗಂಗಾ ಆರತಿ ಮಾದರಿಯಲ್ಲಿ "ಆರೂಢ ಆರತಿ " ನಡೆಯಿತು. ಇದಕ್ಕಾಗಿ ಶ್ರೀಮಠದ ಆವರಣದಲ್ಲಿನ ಪುಷ್ಕರಣೆ ಪಕ್ಕ ಪ್ರತ್ಯೇಕ ಕಟ್ಟೆ ನಿರ್ವಿುಸಲಾಗಿತ್ತು. ಆರೂಢ ಆರತಿ ಬೆಳಗುವುದಕ್ಕಾಗಿ 15 ಜನರಿಗೆ ತರಬೇತಿ ನೀಡಲಾಗಿತ್ತು. ಒಟ್ಟು 35 ನಿಮಿಷಗಳ ವರೆಗೆ ನಡೆದ ಆರತಿಯಲ್ಲಿ ಗಣೇಶ ಸ್ತೋತ್ರ, ಶ್ರೀ ಸಿದ್ಧಾರೂಢರ ಮಂತ್ರ ಹಾಗೂ ಇನ್ನಿತರ ಧಾರ್ವಿುಕ ಆಚರಣೆ ನಡೆದವು. ಆರತಿ ಬೆಳಗಲು ಆರಂಭಿಸುತ್ತಿದ್ದಂತೆ ಸಾವಿರಾರು ಭಕ್ತರು ಶ್ರೀಸಿದ್ಧಾರೂಢ ಮಹಾರಾಜಕೀ ಜೈ, ಗುರುನಾಥಾರೂಢರ ಮಹಾರಾಜ್‌ ಕೀ ಜೈ ಎಂಬ ಜಯಘೋಷಗಳು ಮುಗಿಲು ಮುಟ್ಟುವಂತಿತ್ತು.

30 ಸಾವಿರಕ್ಕೂ ಅಧಿಕ ಭಕ್ತರು

ಪ್ರತಿ ಅಮಾವಾಸ್ಯೆಗೆ ಶ್ರೀಸಿದ್ಧಾರೂಢರ ಮಠಕ್ಕೆ 10 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವುದು ಸಾಮಾನ್ಯ. ಆದರೆ, ಈ ಬಾರಿಯ ಆರೂಢ ಆರತಿ ಕಣ್ತುಂಬಿಕೊಳ್ಳಲು ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಕಲಬುರಗಿ ಸೇರಿದಂತೆ ನಾನಾ ಜಿಲ್ಲೆಗಳಿಂದ 30000ಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಇನ್ನು ಬೆಳಗ್ಗೆಯಿಂದಲೇ ಶ್ರೀಮಠದಲ್ಲಿ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಆರೂಢರ ಗದ್ದುಗೆಯ ದರ್ಶನ ಪಡೆದರು. ಬಳಿಕ ಪ್ರಸಾದ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಬುದ್ಧ ಭಾರತ ನಿರ್ಮಾಣ ಕನಸು ಕಂಡವರು ಅಂಬೇಡ್ಕರ್‌: ಪ್ರೊ. ವಿಶ್ವನಾಥ
ಅಕ್ಷಯ ಪಾತ್ರೆಗೆ ಆಧುನಿಕ ತಂತ್ರಜ್ಞಾನದ ಯಂತ್ರ