ಹರಪನಹಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿದೆ ಎಂದು ವಿಪ ಮಾಜಿ ಸದಸ್ಯ ಅರುಣ್ ಶಹಪುರ ಆರೋಪಿಸಿದರು.
10ನೇ ತರಗತಿ ಮತ್ತು ದ್ವಿತೀಯ ಪಿಯುಸಿಗೆ ತಲಾ ಮೂರು ಪರೀಕ್ಷೆಗಳನ್ನು ನಡೆಸುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ದೂರಿದರು. ಮೂರು ಪರೀಕ್ಷೆಗಳಿಗೂ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಕಟ್ಟಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡುವ ಮೂಲಕ ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಪಠ್ಯಕ್ರಮದಡಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 9 ಲಕ್ಷದಷ್ಟು ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. 1 ಕೋಟಿ ಮಕ್ಕಳ ಭವಿಷ್ಯ ಅತಂತ್ರಕ್ಕೆ ತಳ್ಳುವ ಕೆಲಸ ನಡೆದಿದೆ. ಶಿಕ್ಷಣ ಇಲಾಖೆ ನಿಭಾಯಿಸುವಲ್ಲಿ ಸಚಿವರು ವಿಫಲರಾಗಿದ್ದು, ಸರ್ಕಾರದ ಸೂತ್ರದ ಗೊಂಬೆಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿದರು.5, 8, 9 ಮತ್ತು 11ನೇ ತರಗತಿ ಪರೀಕ್ಷೆಗಳೂ ಗೊಂದಲಕ್ಕೆ ಒಳಗಾದವು, ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬ ವಿಚಾರ ವಿದ್ಯಾರ್ಥಿಗಳು, ಪಾಲಕರಿಗೆ ತಲೆ ನೋವಾಗಿ ಪರಿಣಮಿಸಿತು. ಈ ವಿಚಾರವಾಗಿ ನ್ಯಾಯಾಲಯದಲ್ಲೂ ಸರ್ಕಾರ ಛೀಮಾರಿ ಹಾಕಿಸಿಕೊಂಡಿತು ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಒಂದೇ ಒಂದು ಶಾಲಾ ಕೊಠಡಿ ಭೂಮಿಪೂಜೆ ನಡೆದಿಲ್ಲ. ಶಿಕ್ಷಕರ ನೇಮಕ ಇಲ್ಲ. ಸರ್ಕಾರ ಶಿಕ್ಷಣ ಕ್ಷೇತ್ರವನ್ನು ದೂರಾಡಳಿತಕ್ಕೆ ತಳ್ಳಿದೆ ಎಂದು ವಾಗ್ದಾಳಿ ನಡೆಸಿದರು.ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಪದವೀಧರ ನೀರುದ್ಯೋಗ ಯುವಕ-ಯುವತಿಯರಿಗೆ ವಿದ್ಯಾನಿಧಿ ಯೋಜನೆ ಮೂಲಕ ಹಣ ನೀಡಲಾಗುವುದು ಎಂದು ಭರವಸೆ ನೀಡಿತ್ತು ಆದರೆ ಇದುವರೆಗೂ ಒಬ್ಬೆ ಒಬ್ಬ ಪದವೀಧರನಿಗೆ ಹಣ ಬಂದಿಲ್ಲ ಎಂದು ದೂರಿದರು.
ಪದವೀಧರರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲ್‌ಗೆ ಮತ ನೀಡಿ ಎಂದು ಮತದಾರರಲ್ಲಿ ವಿನಂತಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮುಖಂಡರಾದ ಎಂ.ಪಿ.ನಾಯ್ಕ್, ಕೊಟ್ರಪ್ಪ, ಆರುಂಡಿ ನಾಗರಾಜ, ಕಣಿವಿಹಳ್ಳಿ ಮಂಜುನಾಥ, ಮುದಕವನವರ್ ಶಂಕರ, ಎಲ್.ಮಂಜ್ಯಾನಾಯ್ಕ್, ಮಹೇಶ, ಬಿ.ವೈ.ವೆಂಕಟೇಶನಾಯ್ಕ್, ಓಂಕಾರಗೌಡ, ಚನ್ನನಗೌಡ, ಲಿಂಗಾನಂದ, ಕುಸುಮ ಜಗದೀಶ, ಸಪ್ನ ಮಲ್ಲಿಕಾರ್ಜುನ, ಕಡತಿ ರಮೇಶ, ಎಂ.ಚಂದ್ರಶೇಖರ್ ಇದ್ದರು.