ಕನ್ನಡಪ್ರಭ ವಾರ್ತೆ ಶಿವಮೊಗ್ಗಜನಸಾಮಾನ್ಯರ ಮೇಲೆ ಆರ್ಥಿಕ ಹೊರೆಯಾಗುತ್ತಿರುವ ಬಸ್ ಪ್ರಯಾಣ ದರ ಏರಿಕೆ ತಕ್ಷಣ ಹಿಂಪಡೆಯಬೇಕು ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ಒತ್ತಾಯಿಸಿದ್ದಾರೆ.
ಬಸ್ ಪ್ರಯಾಣ ದರ ಏರಿಕೆಯಿಂದ ದಿನನಿತ್ಯ ಕೆಲಸಕ್ಕೆ ತೆರಳುವ ಕಾರ್ಮಿಕರು, ವಿದ್ಯಾರ್ಥಿಗಳು, ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಲಿವೆ. ಈಗಾಗಲೇ ಸಾರಿಗೆ ಸಂಸ್ಥೆಗಳ ಬಸ್ಗಳನ್ನೇ ಅವಲಂಬಿಸಿರುವ ಸಾವಿರಾರು ಜನರು ತಮ್ಮ ಮಾಸಿಕ ಆದಾಯದ ಹೆಚ್ಚಿನ ಭಾಗವನ್ನು ಪ್ರಯಾಣಕ್ಕಾಗಿಯೇ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಉಚಿತ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಭರವಸೆಗಳನ್ನು ನೀಡುತ್ತಿರುವ ಸರ್ಕಾರ, ಮತ್ತೊಂದು ಕಡೆ ಸಾರ್ವಜನಿಕ ಸಾರಿಗೆ ಸೇರಿದಂತೆ ಅಗತ್ಯ ಸೇವೆಗಳ ದರ ಹೆಚ್ಚಿಸುವ ಮೂಲಕ ಅದೇ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯನ್ನು ಜನಸಾಮಾನ್ಯರ ಮೇಲೆ ವರ್ಗಾಯಿಸುವುದು ಜನಪರ ಆಡಳಿತದ ಲಕ್ಷಣವಲ್ಲ ಎಂದಿದ್ದಾರೆ.
ಶಿವಮೊಗ್ಗದಿಂದ ಚನ್ನಗಿರಿಗೆ ₹70:ಶಿವಮೊಗ್ಗದಿಂದ ಚನ್ನಗಿರಿಗೆ ಈ ಹಿಂದೆ 56 ರು. ಇದ್ದ ಪ್ರಯಾಣ ದರ ಈಗ 70 ರು. ಗಳಿಗೆ ಏರಿಕೆಯಾಗಿದೆ. ಮತ್ತೊಂದು ಮಾರ್ಗದಲ್ಲಿ 105 ರು. ಇದ್ದ ದರ 140 ರು. ಗಳಿಗೆ ಹೆಚ್ಚಳವಾಗಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಈ ಹಿಂದೆ 90 ರು. ಇದ್ದ ಪ್ರಯಾಣ ದರ ಈಗ 102 ರು.ಗಳಿಗೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಡೀಸೆಲ್ ಬೆಲೆಯನ್ನು ಹೆಚ್ಚಿಸದಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಏಕಾಏಕಿ ಹೆಚ್ಚಿಸಿರುವುದಕ್ಕೆ ಸಮರ್ಪಕ ಕಾರಣಗಳನ್ನು ಜನರ ಮುಂದಿಡಬೇಕು. ಸಾರಿಗೆ ಸಂಸ್ಥೆಗಳ ನಿರ್ವಹಣೆ ಮತ್ತು ಆರ್ಥಿಕ ಸದೃಢತೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಬದಲು, ಪ್ರಯಾಣಿಕರ ಮೇಲೆಯೇ ಹೆಚ್ಚುವರಿ ಹೊರೆ ಹಾಕುತ್ತಿರುವುದು ಖಂಡನೀಯ ಎಂದು ದೂರಿದ್ದಾರೆ.
ಜನಸಾಮಾನ್ಯರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ನೌಕರರ ಹಿತದೃಷ್ಟಿಯಿಂದ ಬಸ್ ದರ ಏರಿಕೆಯ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿರುವ ಅವರು ಸರ್ಕಾರ ಜನರ ಮನವಿಗೆ ಸ್ಪಂದಿಸದಿದ್ದಲ್ಲಿ, ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ಡಿ. ಎಸ್. ಅರುಣ್, ವಿಧಾನಪರಿಷತ್ ಸದಸ್ಯ